LATEST NEWS
ಕಾರಿನಲ್ಲಿದ್ದ ಕೊರಗಜ್ಜನ ಭಾವಚಿತ್ರ ತೆಗೆಯುವಂತೆ ಸಂಚಾರಿ ಪೊಲೀಸರ ಒತ್ತಡ – ಸ್ಥಳದಲ್ಲಿ ಬಿಗುವಿನ ವಾತಾವರಣ
ಮಂಗಳೂರು ಅಗಸ್ಟ್ 31: ಕಾರಿನಲ್ಲಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಅದನ್ನು ತೆಗಯಲು ಹೇಳಿದ ಪೊಲೀಸ್ ಸಿಬ್ಬಂದಿಯ ವಿರುದ್ದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ನಡೆದಿದೆ.
ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಾರುತಿ ಕಾರೊಂದನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ಕರ್ತವ್ಯದಲ್ಲಿದ್ದ ಎಎಸ್ಸೈ ಯೊಬ್ಬರು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಟಿಸಲಾಗಿದ್ದ ಓಂ ಸಾಯಿ, ಸ್ವಾಮಿಕೊರಗಜ್ಜ, ಟೀಂ ಪರಶು ರಾಮ್ ಎಂಬ ಸ್ಟಿಕ್ಕರ್ ಗಳನ್ನ ತೆಗೆಯಲು ಹೇಳಿದ್ದಾರೆ. ತಪ್ಪಿದಲ್ಲಿ ಅದಕ್ಕೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.
ಈ ಸಂದರ್ಭ ಕಾರಿನ ಚಾಲಕ ಹಿಂದೂ ಸಂಘಟನೆಯ ಮುಖಂಡರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆಯ ಮುಖಂಡರು ಪೊಲೀಸ್ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸ್ಥಳದಲ್ಲಿದ್ದ ಕುಪಿತಗೊಂಡ ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಚದುರಿಸಿದರು.