KARNATAKA
‘ಮಿನುಗಾರಿಕೆಗೆ ಮಾರಕವಾಗುತ್ತಿರುವ ‘ಬುಲ್ ಟ್ರಾಲ್’ ಗಳನ್ನು ಮಟ್ಟಹಾಕಿ’; ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟ ನಾಡದೋಣಿ ಮೀನುಗಾರರು..!
ಉಡುಪಿ: ಕಾನೂನು ಬಾಹಿರ ಹಾಗೂ ಅವೈಜ್ಞಾನಿಕ ಬುಲ್‌ಟ್ರಾಲ್ ಮೀನುಗಾರಿಕೆ ಮಾಡುತ್ತಿರುವ ಬೋಟ್‌ಗಳ ವಿರುದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕೆಂಗಣ್ಣು ಬೀರಿದ್ದು ಉಡುಪಿ ಜಿಲ್ಲೆಯಲ್ಲಿ ಬುಲ್ ಟ್ರಾಲ್ ಮೀನುಗಾರಿಕಾ ದೋಣಿಗಳ ಮೇಲೆ ನಾಡ ದೋಣಿ ಮೀನುಗಾರರು ಮುಗಿ ಬಿದ್ದಿದ್ದಾರೆ.
ಉಡುಪಿಯ ಬೈಂದೂರು ವಲಯ ನಾಡ ದೋಣಿ ಮತ್ತು ಗಂಗೊಳ್ಳಿ ನಾಡ ದೋಣಿ ಮೀನುಗಾರರು ಒಂದು ಗೂಡಿ ಸುಮಾರು ನೂರಕ್ಕೂ ಹೆಚ್ಚು ದೋಣಿಯವರು ಬುಲ್ ಟ್ರಾಲ್ ಗಳನ್ನು ಸಮುದ್ರದಲ್ಲೇ ತಡೆದು ನಿಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮುದ್ರ ತೀರ ಪ್ರದೇಶದಲ್ಲಿ ಬುಲ್‌ಟ್ರಾಲ್ ಮಾಡುವುದರಿಂದ ಮೀನುಗಳ ಸಂತತಿ ನಾಶವಾಗುತ್ತಿದೆ. ಬುಲ್‌ಟ್ರಾಲ್ ಲೈಟ್ ಫಿಶಿಂಗ್‌ನಿಂದ ನಾಡದೋಣಿ ಮೀನುಗಾರರ ಜೀವನಕ್ಕೆ ತೊಂದರೆಯಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆಗೆ ಮಾಡುತ್ತಿರುವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಮೀನುಗಾರರ ಆಗ್ರಹವಾಗಿದ್ದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತರಲಾಗಿತ್ತು.ಮಂಗಳೂರಿನಿಂದ ಕಾರವಾರದ ತನಕ ನಾಡ ದೋಣಿ ಮೀನುಗಾರರು ಸಭೆ ನಡೆಸಿ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಟ್ರಾಲ್ ಬೋಟ್‌ನವರು ಸುಮಾರು 45 ಪೊಸಿಷನ್ 29 ಲಾಂಗ್‌ನಲ್ಲಿ ಬುಲ್‌ಟ್ರಾಲ್ ಮಾಡುತ್ತಿದ್ದ ದೃಶ್ಯಗಳು ಕಂಡುಬಂದಿದ್ದು, ಈ ಹಿಂದೆಯೇ ನಾಡದೋಣಿಯವರು ಇದನ್ನು ಪ್ರತಿಭಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ನಾಡ ದೋಣಿ ಮೀನುಗಾರರಿಗೆ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಯಲಾಗಿದೆ.
ಬುಲ್‌ಟ್ರಾಲ್ ಮೀನುಗಾರಿಕೆ ಹೀಗೆಯೇ ಮುಂದುವರಿದರೆ ನಾಡ ದೋಣಿ ಮೀನುಗಾರರ ಕುಟುಂಬ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ. ಇದೊಂದು ಅವೈಜ್ಞಾನಿಕ ಮೀನುಗಾರಿಕೆ. ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ಭಾರತದಲ್ಲಿ ನಿಷೇಧವಿದೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರದ ಆದೇಶದ ಪ್ರಕಾರ ಈ ರೀತಿಫಿಶಿಂಗ್ ಮಾಡುವಂತಿಲ್ಲ. ಅದರ ಹೊರತಾಗಿಯೂ ಅಲ್ಲಲ್ಲಿ ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವವರ ವಿರುದ್ಧ ಲೈಸೆನ್ಸ್ ರದ್ದತಿ, ದಂಡ ವಿಧಿಸುವುದರ ಮುಖಾಂತರ ಕಠಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಕಾನೂನುಬಾಹಿರ ಮೀನುಗಾರಿಕೆ ಚಟುವಟಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಾಡ ದೋಣಿ ಮೀನುಗಾರಿಗೂ ಮತ್ತು ಬುಲ್‌ಟ್ರಾಲ್ ಬೋಟ್ ನವರಿಗೂ ಸಂಘರ್ಷ ಉಂಟಾಗುವ ಸಂಭವವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಮತ್ತು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಾರರು ಸೇರಿ ಹೋರಾಟ ಮಾಡುತ್ತೇವೆ ಎಂದು ಕರಾವಳಿಯ ಮೂರೂ ಜಿಲ್ಲೆಯ ನಾಡ ದೋಣಿ ಮೀನುಗಾರರ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಮುಖಂಡರಾದ ನಾಗೇಶ್ ಖಾರ್ವಿ, ಸುರೇಶ್ ಖಾರ್ವಿ, ವೆಂಕಟರಮಣ ಖಾರ್ವಿ, ಡಿ. ಚಂದ್ರ ಖಾರ್ವಿ, ಮದನ್ ಕುಮಾರ್, ಯಶ್ವಂತ್ ಖಾರ್ವಿ,ರಾಮ ಖಾರ್ವಿ, ವೆಂಕಟರಮಣ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.