DAKSHINA KANNADA
ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ನಿರ್ದೇಶಕ ಮಂಡಳಿ ಚುನಾವಣೆ – ಸಹಕಾರಿ ಭಾರತಿಗೆ ಬಂಡಾಯದ ಬಿಸಿ
ಪುತ್ತೂರು ಜನವರಿ 21: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಆಎಳಿತ ಮಂಡಳಿ ಚುನಾವಣೆ ಜನವರಿ 25 ರಂದು ನಡೆಯಲಿದ್ದು, ಆಡಳಿತಾರೂಢ ಸಹಕಾರಿ ಭಾರತಿಗೆ ಈ ಬಾರಿ ಬಂಡಾಯದ ಬಿಸಿ ತಟ್ಟಿದೆ. 13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಬ್ಯಾಂಕ್ ನ ನಿರ್ದೇಶಕರೇ ಆಗಿರುವ ಸದಾಶಿವ ಪೈ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸಹಕಾರ ಭಾರತಿಯ ಸೂಚನೆಯಂತೆ ಈ ಬಾರಿಯ ಚುನಾವಣೆಯಲ್ಲಿ ಹಿರಿಯ ನಾಲ್ಕು ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲಾ ಸ್ಥಾನಗಳಿಗೆ ಹೊಸ ಮುಖವನ್ನು ಪರಿಚಯಿಸಲಾಗುವುದು. ಆ ಕಾರಣಕ್ಕಾಗಿ ಹೆಚ್ಚಿನವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದಾಗಿತ್ತು. ಈ ಲಿಸ್ಟ್ ನಲ್ಲಿ ಸದಾಶಿವ ಪೈ ಕೂಡಾ ಸೇರಿದ್ದ ಕಾರಣ, ಚುನಾವಣೆಯಿಂದ ದೂರ ಉಳಿದಿದ್ದರು. ಆದರೆ ನಾಲ್ವರು ಹಿರಿಯ ಸದಸ್ಯರ ಹೊರತಾಗಿಯೂ ಸಹಕಾರ ಭಾರತಿಯಿಂದ ಚಂದ್ರಶೇಖರ ಬಪ್ಪಳಿಗೆ ನಾಮಪತ್ರ ಸಲ್ಲಿಸಿದ್ದರು. ಇದನ್ನು ವಿರೋಧಿಸಿದ ಸದಾಶಿವ ಪೈ ಸಹಕಾರ ಭಾರತಿ ತಮ್ಮ ಮಾತಿನಿಂದ ತಪ್ಪಿದೆ ಎನ್ನುವ ಕಾರಣಕ್ಕಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷ ಇಲ್ಲದ ಕಾರಣ, ಪಕ್ಷೇತರ ಅಭ್ಯರ್ಥಿಯಾಗಿ ತನ್ನ ವೈಯುಕ್ತಿಕ ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನನ್ನ ಸ್ಪರ್ಧೆ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧವಲ್ಲ ಎಂದಿದ್ದಾರೆ. ಕೆಲವು ಸ್ಥಾಪಿತ ಹಿತಾಸಕ್ತಿಗಳ ಹೇಳಿಕೆಗಳಿಂದ ನನಗೆ ಬೇಸರವಾಗಿದ್ದು, ಈ ಕಾರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಬ್ಯಾಂಕಿನ ಅಭಿವೃದ್ಧಿಗೆ ಹಿಂದೆಯೂ ಕರಲಸ ಮಾಡಿದ್ದೇನೆ, ಚುನಾವಣೆಯಲ್ಲಿ ಗೆದ್ದರೆ ಮುಂದೆಯೂ ಕೆಲಸ ಮಾಡುತ್ತೇನೆ ಎಂದು ಸದಾಶಿವ ಪೈ ಆಶಾವಾದ ವ್ಯಕ್ತಪಡಿಸಿದ್ದಾರೆ.