ಮಲಯಾಳಂ ಚಿತ್ರರಂಗದ ಖ್ಯಾತ ನಟ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟೊವಿನೋ ಥಾಮಸ್, ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಪಳ್ಳಿ ಚಟ್ಟಂಬಿ’ ಬಿಡುಗಡೆಯ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿಂದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಮತ್ತು ಜೂನಿಯರ್ ಎನ್ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಶನ್ನ ‘ಡ್ರ್ಯಾಗನ್’ ಸಿನಿಮಾಗಳಲ್ಲಿ ಟೊವಿನೋ ನಟಿಸಲಿದ್ದಾರೆ ಎಂಬ ಸುದ್ಧಿ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, “ಸದ್ಯಕ್ಕೆ ನಾನು ಯಾವುದೇ ಕನ್ನಡ ಸಿನಿಮಾದ ಭಾಗವಾಗಿಲ್ಲ. ದೀರ್ಘಕಾಲದ ಕಾಲ್ಶೀಟ್ ನೀಡಬೇಕಾದ ಅನಿವಾರ್ಯತೆ ಮತ್ತು ಡೇಟ್ಸ್ ಸಮಸ್ಯೆಯಿಂದಾಗಿ ಈ ಚಿತ್ರಗಳಿಂದ ದೂರ ಉಳಿದಿದ್ದೇನೆ,” ಎಂದು ತಿಳಿಸಿದರು.
ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಶೈಲಿಯೇ ಬೇರೆ. ಅಲ್ಲಿ ಅಲ್ಪಾವಧಿಯಲ್ಲಿ ಚಿತ್ರೀಕರಣ ಮುಗಿಯುತ್ತದೆ. ಆದರೆ ದೊಡ್ಡ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ವರ್ಷಗಟ್ಟಲೆ ಸಮಯ ನೀಡಬೇಕಾಗುತ್ತದೆ. ಇದರಿಂದ ನನ್ನ ಇತರ ಮಲಯಾಳಂ ಸಿನಿಮಾಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಯಶ್ ಅವರ ಸರಳತೆಯ ಬಗ್ಗೆ ಮಾತನಾಡಿದ ಟೊವಿನೋ, “ನನ್ನ ಕೆರಿಯರ್ನ ಮೈಲಿಗಲ್ಲು ಸಿನಿಮಾ ‘ಮಿನ್ನಲ್ ಮುರಳಿ’ಯ ಟೀಸರ್ ಬಿಡುಗಡೆ ಮಾಡುವಂತೆ ಕೇಳಿದಾಗ ಯಶ್ ತಕ್ಷಣವೇ ಒಪ್ಪಿಕೊಂಡಿದ್ದರು. ಅವರು ಅಂದು ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ,” ಎಂದು ರಾಕಿ ಭಾಯ್ ಗುಣಗಾನ ಮಾಡಿದರು.
ಮಲಯಾಳಂನ ಐತಿಹಾಸಿಕ ಮಾಸ್ ಆಕ್ಷನ್ ಚಿತ್ರವಾಗಿರುವ ‘ಪಳ್ಳಿ ಚಟ್ಟಂಬಿ’ ಶೀಘ್ರದಲ್ಲೇ ತೆರೆಗೆ ಬರಲಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ಇಡೀ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟಿದೆ. ಕನ್ನಡ ಪ್ರೇಕ್ಷಕರು ಗುಣಮಟ್ಟದ ಸಿನಿಮಾಗಳನ್ನು ಯಾವಾಗಲೂ ಕೈಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ಇದೇ ವೇಳೆ ಚಿತ್ರತಂಡ ವ್ಯಕ್ತಪಡಿಸಿತು.