LATEST NEWS
ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭ
ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭ
ಮಂಗಳೂರು ಸೆಪ್ಟೆಂಬರ್ 2: ನವಯುಗ ಕಂಪೆನಿಯ ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ಟೋಲ್ ವಂಚಿಸುತ್ತಿದ್ದಾರೆ ಎಂದು ಹೆಜಮಾಡಿ ಒಳರಸ್ತೆಯಲ್ಲಿ ಸಂಚರಿಸಿ ಸಾಗುವ ವಾಹನಗಳಿಂದ ಶನಿವಾರದಿಂದ ಟೋಲ್ ಸಂಗ್ರಹ ಆರಂಭಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬಳಿ ನವಯುಗ ಕಂಪೆನಿ ಟೋಲ್ ಸಂಗ್ರಹವನ್ನು ಆರಂಭಿಸಿತ್ತು. ಆದರೆ ಟೋಲ್ ಸಂಗ್ರಹ ಕೇಂದ್ರದ ಪಕ್ಕದಲ್ಲೆ ಇರುವ ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ವಾಹನಗಳು ಟೋಲ್ ಗೇಟ್ ತಪ್ಪಿಸಿ ಸಂಚಾರ ನಡೆಸಲು ಆರಂಭಿಸಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ತಪ್ಪಿಸಿ ಒಳ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಲಕ್ಷಾಂತರ ರೂಪಾಯಿ ಟೋಲ್ ನಷ್ಟವಾಗುತ್ತಿತ್ತು ಎಂದು ನವಯುವ ಕಂಪೆನಿ ಆರೋಪಿಸಿತ್ತು. ಇದನ್ನು ಮನಗಂಡು ಗುತ್ತಿಗೆದಾರ ನವಯುಗ ಕಂಪೆನಿ ಹೆಜಮಾಡಿ ಗುಡ್ಡೆಯಂಗಡಿ ಬಳಿ ಒಳರಸ್ತೆಗೂ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೆಜಮಾಡಿ ಗ್ರಾಮಸ್ಥರು ಹಲವಾರು ಬಾರಿ ಕಾಮಗಾರಿಗೆ ತಡೆಯೊಡ್ಡಿದ್ದರು. ಲೋಕೋಪಯೋಗಿ ರಸ್ತೆಗೆ ಟೋಲ್ ಆರಂಭಿಸಿರುವುದರ ಬಗ್ಗೆ ಇತ್ತೀಚೆಗೆ ನಡೆದ ಹೆಜಮಾಡಿ ಗ್ರಾಮಸಭೆಯಲ್ಲಿ ಇಲಾಖೆ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಂತಿಮವಾಗಿ ಇದೀಗ ಅಪೂರ್ಣ ಕಾಮಗಾರಿಯಲ್ಲಿಯೇ ಪೊಲೀಸ್ ಬಲದೊಂದಿಗೆ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಒಳ ರಸ್ತೆಯಲ್ಲಿ ಟೋಲ್ ಅರಂಭವಾಗಿದ್ದರಿಂದ ಕೆಲ ವಾಹನಗಳವರು ಟೋಲ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯೂ ನಡೆಸಿದರು.