LATEST NEWS
ಉಡುಪಿಯಲ್ಲಿ ಇಂದು 204 ಮಂದಿಗೆ ಕೊರೊನಾ ಸೊಂಕು
ಉಡುಪಿಯಲ್ಲಿ ಕೊರೋನಾ ರಣಕೇಕೆ, ಒಂದೇ ದಿನ ದ್ವಿಶತಕ !
ಉಡುಪಿ, ಜೂನ್ 5 : ಮಹಾರಾಷ್ಟ್ರದಿಂದ ಬಂದ ಜನರೇ ಕೃಷ್ಣನಗರಿಗೆ ಕಂಟಕವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಕೊರೋನಾ ಉಡುಪಿ ಜಿಲ್ಲೆಯಲ್ಲಿ ರಣಕೇಕೆ ಹಾಕತೊಡಗಿದ್ದು ಇಂದು ದ್ವಿಶತಕದ ದಾಖಲೆಯನ್ನೇ ಬಾರಿಸಿದೆ.
ಇವತ್ತು ಜಿಲ್ಲೆಯಲ್ಲಿ 204 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಉಡುಪಿ ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 768ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಒಂದೊಮ್ಮೆ ಗ್ರೀನ್ ಝೋನ್ ಆಗಿದ್ದ ಉಡುಪಿ ಇಂದು ಅತಿಹೆಚ್ಚು ಸೋಂಕಿತರ ಲಿಸ್ಟ್ ನಲ್ಲಿ ರಾಜ್ಯದಲ್ಲೇ ನಂಬರ್ ವನ್ ಸ್ಥಾನದಲ್ಲಿದೆ.
ಮಹಾರಾಷ್ಟ್ರದಿಂದ ಬಂದು ಪರೀಕ್ಷೆಗೊಳಗಾಗಿ ಸರಕಾರಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇದ್ದವರಿಗೇ ಸೋಂಕು ಅಂಟುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 732 ಮಂದಿ ಸೋಂಕಿತರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ, 2000ಕ್ಕಿಂತ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರ ಪೈಕಿ ಓರ್ವ ಸ್ಥಳೀಯ ಪೊಲೀಸ್ ಸಿಬ್ಬಂದಿ ಇದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಇಲಾಖಾ ಸಿಬ್ಬಂದಿಗಳ ಚೆಕಪ್ ವೇಳೆ ಇವರಲ್ಲಿ ಕೊರೋನಾ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಗೆ ಆಗಮಿಸಿದ 8 ಸಾವಿರ ಜನರ ಗಂಟಲ ದ್ರವ ಪರೀಕ್ಷೆ ಮುಗಿದಿದೆ. ಇಂದು ಸಂಜೆಯೊಳಗೆ ಮಾದರಿ ಸಂಗ್ರಹಿಸಿದ ಎಲ್ಲಾ ಟೆಸ್ಟ್ ಮುಗಿಯುತ್ತದೆ. ಆ ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಿದ್ದಾರೆ.