LATEST NEWS
ತಕ್ಷಣ ಜಾರಿಗೆ ಬರುವಂತೆ ಟಿಪ್ಪು ಜಯಂತಿ ರದ್ದು ರಾಜ್ಯ ಸರಕಾರ ಆದೇಶ

ತಕ್ಷಣ ಜಾರಿಗೆ ಬರುವಂತೆ ಟಿಪ್ಪು ಜಯಂತಿ ರದ್ದು ರಾಜ್ಯ ಸರಕಾರ ಆದೇಶ
ಮಂಗಳೂರು ಜುಲೈ 30: ಬಹುವಿವಾದಿತ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿದೆ. ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಆರಂಭಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುವಂತೆ ವಿರಾಜಪೇಟೆಯ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಅವರು ನೂತನ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕøತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

ಟಿಪ್ಪು ಜಯಂತಿ ಆಚರಣೆ ರಾಜ್ಯ ಸರಕಾರ ಆರಂಭಿಸಿದ ಸಂದರ್ಭ ರಾಜ್ಯದ ವಿವಿದೆಡೆಗಳಲ್ಲಿ ಭಾರಿ ಗಲಭೆಗಳು ನಡೆದಿದ್ದವು, ಅಲ್ಲದೆ ಮಡಿಕೇರಿಯಲ್ಲಿ ಟಿಪ್ಪುಜಯಂತಿ ವಿರೋಧ ಘರ್ಷಣೆಯಲ್ಲಿ ಒರ್ವ ಸಾವನಪ್ಪಿದ್ದರು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಚರಣೆ ವಿರೋಧ ವ್ಯಕ್ತವಾಗಿದೆ. ಇಂದಿಗೂ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಇದ್ದು, ಜನರ ನಡುವಿನ ಸಾಮರಸ್ಯ ಹದಗೆಟ್ಟಿದೆ. ಆದ್ದರಿಂದ ಟಿಪ್ಪು ಜಯಂತಿಯನ್ನ ಸರ್ಕಾರದಿಂದ ಆಚರಣೆ ಮಾಡುವ ಆದೇಶವನ್ನು ಕೂಡಲೇ ರದ್ದುಪಡಿಸಲು ಅಗತ್ಯ ಆದೇಶ ನೀಡಲು ಮನವಿ ಮಾಡಿದ್ದರು.
ಬೋಪಯ್ಯ ಅವರ ಮನವಿಯನ್ನು ಜುಲೈ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ಸಚಿವ ಸಂಪುಟ ರಾಜ್ಯಾದ್ಯಂತ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನ ರದ್ದುಗೊಳಿಸಲು ಆದೇಶ ಮಾಡಿದೆ. ಈ ಕುರಿತು ಜುಲೈ 30 ರಂದು ಅಧಿಕೃತ ಆದೇಶ ನೀಡಲಾಗಿದೆ.
ಬಿಜೆಪಿ ಪಕ್ಷ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದರು, ಇದೀಗ ಈ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಂಡಿದೆ.