Connect with us

LATEST NEWS

ಬಿರುಗಾಳಿ ಮಳೆ ಮಧ್ಯೆಯೂ ಮಂಗಳೂರಿನಲ್ಲಿ ಘರ್ಜಿಸಿದ ಪಾಲಿಕೆ ‘ಟೈಗರ್ ‘..!

ಮಂಗಳೂರು : ಬಿರುಗಾಳಿ ಮಳೆಯ ಮಧ್ಯೆಯೂ 2 ನೇದಿನವಾದ ಮಂಗಳವಾರ ಮಂಗಳೂರು ನಗರದಲ್ಲಿ ಟೈಗರ್ ಕಾರ್ಯಾಚರಣೆ ಮುಂದುವರೆದಿದೆ. ಎಡೆ ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆ ಮಧ್ಯೆ ಪಾಲಿಕೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ನೆರವಿನೊಂದಿಗೆ ನಗರದ ಪಂಪವೆಲ್ ಕಂಕನಾಡಿ ಪರಿಸರದಲ್ಲಿ ಟೈಗರ್ ಕಾರ್ಯಚರಣೆ ನಡೆಸುತ್ತಿದ್ದಾರೆ.

ಬುಲ್ಡೋಜರ್ ಕಾರ್ಯಾಚರಣೆಗೆ CITU ಖಂಡನೆ
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಬಿಜೆಪಿ ಆಡಳಿತ ನಡೆಸಿದ ಬುಲ್ಡೋಜರ್ ಧಾಳಿ ಅತ್ಯಂತ ಅಮಾನುಷ ಕ್ರತ್ಯವಾಗಿದ್ದು, ಇದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್( CITU) ದ.ಕ.ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

 

ಮಾತ್ರವಲ್ಲದೆ ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಕೂಡಲೇ ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಕೂಡಲೇ ಪರಿಹಾರ ನೀಡಬೇಕು, ಕಾನೂನುಬಾಹಿರ ಬುಲ್ಡೋಜರ್ ಧಾಳಿಯನ್ನು ತಕ್ಷಣ ನಿಲ್ಲಿಸಬೇಕು ,ಧಾಳಿಗೆ ಕಾರಣಕರ್ತರಾದ ಮೇಯರ್ ಕಮಿಷನರ್ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು CITU ದ.ಕ.ಜಿಲ್ಲಾಡಳಿತವನ್ನು ಒತ್ತಾಯಿಸಿದೆ. 13 ವರ್ಷಗಳ ಹಿಂದೆ ಇದೇ ಬಿಜೆಪಿ ಆಡಳಿತ ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಟೈಗರ್ ಕಾರ್ಯಾಚರಣೆ ನಡೆಸಿದರೆ, ಇಂದು‌ ಉತ್ತರಪ್ರದೇಶದ ಯೋಗಿ ಆಡಳಿತದ ಕುಖ್ಯಾತಿ ಮಾದರಿಯ ಬುಲ್ಡೋಜರ್ ಕಾರ್ಯಾಚರಣೆಯನ್ನು ಮಂಗಳೂರಿನ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಸಿರುವುದು ದೌರ್ಜನ್ಯದ ಪರಮಾವಧಿಯಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಧಾಳಿ ನಡೆಸಿ ತಾನು ಮಾಡಿದ ಮಹಾಪರಾಧವನ್ನು ಮುಚ್ಚಿಟ್ಟು, ಬೀದಿಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತದೆ ಎಂಬ ಸುಳ್ಳನ್ನು ಬಿಚ್ಚಿಟ್ಟು ಮಂಗಳೂರಿನ ನಾಗರಿಕರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಆಡಳಿತ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಲಿದೆ.ಕಳೆದ 13 ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ, ಮುದ್ರಿಸಿದ ಗುರುತುಚೀಟಿಯನ್ನು ನೀಡಲಿಲ್ಲ,ಆಗಿಂದಾಗ್ಗೆ ಕರೆಯಬೇಕಾಗಿದ್ದ ಹಾಗೂ ಪ್ರತಿಯೊಂದನ್ನು ತೀರ್ಮಾನ ಮಾಡಬೇಕಾಗಿದ್ದ ಪಟ್ಟಣ ವ್ಯಾಪಾರ ಸಮಿತಿ (TVC)ಯ ಸಭೆಯನ್ನು ಕಳೆದ ಒಂದೂವರೆ ವರ್ಷದಲ್ಲಿ ಕರೆಯಲೇ ಇಲ್ಲ. ಇದ್ಯಾವುದನ್ನು ಮಾಡದೆ ಏಕಾಏಕಿಯಾಗಿ ಧಾಳಿ ನಡೆಸಿ, ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಹಕ್ಕುಗಳ ಸಂರಕ್ಷಣಾ ಕಾಯಿದೆಗೆ ವಿರುದ್ಧವಾಗಿ ನಡೆದುಕೊಂಡ ಮನಪಾದ ಬಿಜೆಪಿ ಆಡಳಿತದ ನಡೆ ಅತ್ಯಂತ ಕ್ರೂರವಾಗಿದೆ ಎಂದು CITU ಆಕ್ರೋಶ ವ್ಯಕ್ತಪಡಿಸಿದೆ. ಬೀದಿಬದಿ ವ್ಯಾಪಾರಸ್ಥರ ಮೇಲೆ ಮನಪಾ ಆಡಳಿತ ನಡೆಸುವ ದೌರ್ಜನ್ಯವನ್ನು ನಿಲ್ಲಿಸಲು ಕೂಡಲೇ ದ.ಕ.ಜಿಲ್ಲಾಡಳಿತ ಮಧ್ಯೆಪ್ರವೇಶಿಸಬೇಕು,ಧಾಳಿ ನಡೆಸಲು ಪ್ರಚೋದನೆ ನೀಡಿರುವ ಮೇಯರ್ ಕಮಿಷನರ್ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ವಶಪಡಿಸಿಕೊಂಡ ವಸ್ತುಗಳನ್ನು ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಸೂಕ್ತ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾದೀತು ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *