ಚಾಮರಾಜನಗರ, ಫೆಬ್ರವರಿ 17: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಕಳೇಬರ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಸ್ಕೂಟರ್ ಕ್ಲಚ್ ವೈರ್ ಕತ್ತಿಗೆ ಸಿಕ್ಕಿ ಹಾಕಿಕೊಂಡು ಹುಲಿ ಸಾವನ್ನಪ್ಪಿದೆ. ಇದೀಗ ಅರಣ್ಯ ಇಲಾಖೆ ಉರುಳು ಹಾಕಿದವರ ಹಿಂದೆ ಬಿದ್ದಿದ್ದು, ಸತತ ವಿಚಾರಣೆಯಲ್ಲಿ ತೊಡಗಿದೆ. ಬೇರೆ ಪ್ರಾಣಿಗೆ ಹಾಕಿದ್ದ ಉರುಳಿಗೆ ಹುಲಿ ಸಿಲುಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗಡಿ ಜಿಲ್ಲೆ ಚಾಮರಾಜನಗರ ಅಂದರೆ ಅದು ಹುಲಿಗಳ ನಾಡು ಎಂದೇ ಪ್ರಸಿದ್ಧ. ಆದರೆ ಹುಲಿಗಳ ಸಾವು ಅರಣ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಡ್ಯಾಂನಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿತ್ತು. ಸತ್ತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಹುಲಿಯ ಕೊರಳಿಗೆ ಸ್ಕೂಟರ್ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ.

ಜಮೀನಿನ ಬೇಲಿ, ಕಾಲುದಾರಿ ಬಳಿ ಇಂತಹ ಉರುಳು ಹಾಕಿರುವ ಬಗ್ಗೆ ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹುಲಿಯ ಹೊಟ್ಟೆಯೊಳಗೆ ನೀರು ಕೂಡ ಸೇರಿಕೊಂಡಿದೆ. ಹುಲಿ ನೀರು ಕುಡಿಯಲು ಹೋದ ವೇಳೆ ಬದುಕಿತ್ತು, ನೀರಿಗೆ ಬಿದ್ದು ಸಾವನ್ನಪ್ಪಿದೆ ಎಂದು ಕೂಡ ಪಶುವೈದ್ಯರು ತಿಳಿಸಿದ್ದಾರೆ. ಅಲ್ಲದೇ ಮೂರರಿಂದ ನಾಲ್ಕು ದಿನಗಳ ಹಿಂದೆಯೇ ಉರುಳು ಹುಲಿಯ ಕತ್ತಿಗೆ ಸುತ್ತಿಕೊಂಡಿದ್ದು, ನಿರಂತರವಾಗಿ ಬಿಗಿದುಕೊಂಡ ಪರಿಣಾಮ ಹುಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಉರುಳಿನಿಂದಲೇ ಹುಲಿ ಸಾವನ್ನಪ್ಪಿದ ಬಗ್ಗೆ ಕನ್ಫರ್ಮ್ ಮಾಡಿಕೊಂಡಿರುವ ಅರಣ್ಯಾಧಿಕಾರಿಗಳು ಉರುಳು ಹಾಕಿದವರ ಪತ್ತೆಗೆ ಮುಂದಾಗಿದ್ದಾರೆ. ಸ್ಥಳೀಯ ರೈತರು, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಣೆ ಕೂಡ ನಡೆಸಿದ್ದಾರೆ. ಈ ರೀತಿಯ ಉರುಳುಗಳು ನಿಮಗೆ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಅಥವಾ ನೀವೆ ಉರುಳನ್ನು ತೆಗೆದು ಬಿಸಾಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಹುಲಿಯ ಬೇಟೆಗೆ ಹಾಕಿದ್ರಾ ಅಥವಾ ಬೇರೆ ಪ್ರಾಣಿಗಳ ಬೇಟೆಗೆ ಉರುಳು ಹಾಕಿದ್ರಾ ಅನ್ನೋ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.

Share Information