LATEST NEWS
ತ್ರಿಶೂರ್: GST ಇಂಟಲಿಜೆನ್ಸ್ ತಂಡ ದಾಳಿ, ಐದು ವರ್ಷಗಳಲ್ಲಿ ಬರೋಬ್ಬರಿ 1,000 ಕೋಟಿ ತೆರಿಗೆ ವಂಚನೆ ಬಯಲು..!
ತ್ರಿಶೂರ್ : ಕೇರಳದ ತ್ರಿಶೂರ್‌ನ ಚಿನ್ನಾಭರಣ ನಿರ್ಮಾಣ ಕೇಂದ್ರಗಳ ಮೇಲೆ GST ಇಂಟೆಲಿಜೆನ್ಸ್ ವಿಭಾಗ (GST intelligence department) ನಡೆಸಿದ ದಾಳಿ ನಡೆಸಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ವಂಚನೆ ಈ ಸಂದರ್ಭ ಪತ್ತೆಯಾಗಿದೆ.
ಕೇರಳ ರಾಜ್ಯದ ಜಿಎಸ್‌ಟಿ ಇಂಟೆಲಿಜೆನ್ಸ್ ವಿಶೇಷ ಆಯುಕ್ತ ಅಬ್ರಹಾಂ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ‘ಆಪರೇಷನ್ ಟೋರೆ ಡೆಲ್ ಓರೋ (Torre del Oro) ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ GST ಗುಪ್ತಚರ ದಳ ಭೇದಿಸಿದ ಅತೀ ದೊಡ್ಡ ವಂಚನೆ ಜಾಲ ಇದಾಗಿದೆ. ಸಂಸ್ಥೆಗಳು ತನ್ನ ಆದಾಯವನ್ನು ಮರೆಮಾಚುವ ಮೂಲಕ ಸರ್ಕಾರಕ್ಕೆ ಭಾರಿ ತೆರಿಗೆ ವಂಚನೆ ಮಾಡಿದೆ.
ಮಾಸಿಕ 10 ಕೋಟಿ ರೂಪಾಯಿ ಆದಾಯವನ್ನು ಹೊಂದಿರುವ ಸಂಸ್ಥೆಯು ಕೇವಲ 2 ಕೋಟಿ ರೂಪಾಯಿ ಮಾತ್ರ ತನ್ನ ಖಾತೆಯಲ್ಲಿ ದಾಖಲಿಸಿರುವುದು ಕಂಡುಬಂದಿದೆ. ಇದೇ ಸಂದರ್ಭ ಅಕ್ರಮವಾಗಿ ಸಂಗ್ರಹಿಸಿದ 108 ಕಿಲೋಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು 5.43 ಕೋಟಿ ರೂಪಾಯಿ ದಂಡನ್ನು ವಿಧಿಸಲಾಗಿದೆ. ಒಟ್ಟು 77 ಸಂಸ್ಥೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ 38 ಸಂಸ್ಥೆಗಳಲ್ಲಿ ತೆರಿಗೆ ವಂಚನೆ ಕಂಡುಬಂದಿದೆ. ಘಟನೆಯ ಕುರಿತು ವಿಸ್ತಾರವಾದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿದೆ. 41 ಘಟಕಗಳ 241 ಅಧಿಕಾರಿಗಳ ತಂಡ ತನಿಖೆಯನ್ನು ಆರಂಭಿಸಿದೆ.