KARNATAKA
ಇಟ್ಟಿಗೆ, ಮರದ ತುಂಡು ಪಾಲಿಶ್ ಮಾಡಿ ಚಿನ್ನ ಎಂದು ಮಾರಲು ಯತ್ನ, ಬಿಹಾರದ ಮೂವರ ಬಂಧನ

ಬೆಂಗಳೂರು, ಮಾರ್ಚ್ 24: ಇಟ್ಟಿಗೆ ಹಾಗೂ ಮರದ ತುಂಡಿಗೆ ಚಿನ್ನದ ಪಾಲಿಶ್ ಮಾಡಿ ಮಾರಾಟ ಮಾಡಲು ಯತ್ನಿಸಿದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ, ಅನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಇದರೊಂದಿಗೆ, ಈಗಾಗಲೇ ಚಿನ್ನ ಕಳ್ಳಸಾಗಣೆ ಪ್ರಕರಣದಿಂದ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು ಚಿನ್ನದ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗುವಂತಾಗಿದೆ.

ನಿಧಿ ಕಥೆ: ಮನೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ಆರೋಪಿಗಳು ಕಥೆ ಕಟ್ಟಿದ್ದರು. ಅಲ್ಲದೆ. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಿಂತ ಅರ್ಧ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಹೇಳುತ್ತಿದ್ದರು. ಮರದ ಹಲಗೆ ಹಾಗೂ ಇಟ್ಟಿಗೆಗೆ ಚಿನ್ನ ಪಾಲಿಶ್ ಮಾಡಿ ವಂಚಿಸುತ್ತಿದ್ದರು.
ನಂಬಿಕೆ ಗಳಿಸಲು ತಂತ್ರ: ತಾವು ನೀಡುತ್ತಿರುವುದು ಅಸಲಿ ಚಿನ್ನವೇ ಎಂಬ ನಂಬಿಕೆ ಬರುವಂತೆ ಮಾಡಲು ಆರೋಪಿಗಳು ಮೊದಲಿಗೆ ಒಂದೆರಡು ಗ್ರಾಂ ಅಸಲಿ ಚಿನ್ನ ನೀಡುತ್ತಿದ್ದರು. ಒಮ್ಮೆ ಜನ ನಂಬಿದ ನಂತರ ನಕಲಿ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದರು. ಚಿನ್ನ ತೆಗೆದುಕೊಳ್ಳಲು ತಾವು ತಿಳಿಸಿದ ಜಾಗಕ್ಕೆ ಬರುವಂತೆ ಹೇಳಿ ಪದೆ ಪದೇ ಲೊಕೇಷನ್ ಬದಲಿಸುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹನ, ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ಕೋಟಿ ರೂ.ಗೂ ಹೆಚ್ಚು ಮೌಲ್ಯದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ ನಟಿ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ಇದೀಗ ನಗರದ ಒಳಗೂ ಚಿನ್ನ ಸಂಬಂಧಿತ ಅಕ್ರಮಗಳು ಹೆಚ್ಚುತ್ತಿರುವುದು ಬಯಲಾಗಿದೆ.
1 Comment