LATEST NEWS
ಅನಿಲ್ ಅಂಬಾನಿ ಬ್ಯಾಂಕ್ ಗಳಿಗೆ ನೀಡಬೇಕಾಗಿರುವ ಹಣವೇ 86 ಸಾವಿರ ಕೋಟಿ..
ಮುಂಬಯಿ: ಮುಳುಗುವ ಹಡಗಾಗಿರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕಂಪೆನಿ ಬ್ಯಾಂಕ್ ಗಳಿಗೆ ಬಾಕಿ ಇರಿಸಿರುವ ಹಣದ ಮೊತ್ತ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯ ಹಾಗೂ ನಿರವ್ ಮೋದಿ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು, ಆದರೂ ಅವರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೇ ಇರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ತಮ್ಮ ಆಸ್ತಿ ಮೌಲ್ಯ ಶೂನ್ಯಕ್ಕೆ ತಲುಪಿದೆ ಎಂದು ಉದ್ಯಮಿ ಅನಿಲ್ ಅಂಬಾನಿ ಇತ್ತೀಚೆಗೆ ತಿಳಿಸಿದ್ದರು. ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರವೇ ಕಂಪನಿ 49,193 ಕೋಟಿ ರೂಪಾಯಿ ಸಾಲ ಪಾವತಿಸಬೇಕಿದೆ. ಇದರ ಜೊತೆಗೆ ರಿಲಯನ್ಸ್ ಟೆಲಿಕಾಂ 24,306 ಕೋಟಿ ರೂ. ಹಾಗೂ ರಿಲಯನ್ಸ್ ಇನ್‌ಫ್ರಾಟೆಲ್ 12,687 ಕೋಟಿ ರೂ.ಗಳ ಸಾಲವನ್ನು ಹೊತ್ತುಕೊಂಡಿವೆ. ಎಲ್ಲವನ್ನೂ ಸೇರಿಸಿದರೆ 86,188 ಕೋಟಿ ರೂಪಾಯಿಗಳಾಗುತ್ತವೆ. ಇದಕ್ಕಿನ್ನೂ ಸ್ಪೆಕ್ಟ್ರಂ ಬಾಕಿ 28,837 ಕೋಟಿ ರೂ.ಗಳನ್ನು ಸೇರಿಸಿಲ್ಲ. ಇದನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಅನಿಲ್ ಅಂಬಾನಿ ಕಂಪನಿಗಳ ಬಾಕಿ ಮೊತ್ತ 1 ಲಕ್ಷ ಕೋಟಿ ರೂ. ದಾಟುತ್ತದೆ.
ಈ ಹಿನ್ನಲೆ ಅನಿಲ್ ಅಂಬಾನಿಯ ದಿವಾಳಿ ಪ್ರಕ್ರಿಯೆಯ ಭಾಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳು ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯೂನಿಕೇಷನ್‌ನ ಖಾತೆಯನ್ನು ವಂಚನೆಯ ಪಟ್ಟಿಗೆ ಸೇರಿಸಿದ್ದವು. ಈ ಕುರಿತಂತೆ ನ್ಯಾಯಾಲಯದ ಮೊರೆ ಹೋಗಿರುವ ಅನಿಲ್ ಅಂಬಾನಿ ಗೆ ದಿಲ್ಲಿ ಹೈಕೋರ್ಟ್ ಕೊಂಚ ರಿಲೀಪ್ ನೀಡಿದ್ದು, ಉದ್ಯಮಿ ಅನಿಲ್ ಅಂಬಾನಿ ಅವರ ಆರ್‌ಕಾಮ್, ರಿಲಯನ್ಸ್ ಟೆಲಿಕಾಂ ಕಂಪನಿಗಳ ಖಾತೆಗಳನ್ನು ‘ವಂಚನೆಯ ಖಾತೆ’ಗಳೆಂದು ಘೋಷಿಸದಂತೆ ಬ್ಯಾಂಕ್‌ಗಳಿಗೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.
ಈ ನಡುವೆ ಅನಿಲ್ ಅಂಬಾನಿ ಬ್ಯಾಂಕ್ ಗಳಿಗೆ ನೀಡಬೇಕಾಗಿರುವ ಹಣ ವಿಜಯ್ ಮಲ್ಯ (9,000 ಕೋಟಿ ರೂ.) ಹಾಗೂ ನೀರವ್ ಮೋದಿಗೆ (7,400 ಕೋಟಿ ರೂ.) ಹೋಲಿಸಿದರೆ ರಿಲಯನ್ಸ್ ಕಮ್ಯೂನಿಕೇಷನ್ಸ್, ಇದಕ್ಕಿಂತ ಹತ್ತು ಪಟ್ಟು ಹೆಚ್ಚಿದಾಗಿದ್ದು, ಹೀಗಿದ್ದೂ ಅನಿಲ್ ಅಂಬಾನಿಯ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ದೂರಿದ್ದಾರೆ.