ಮಂಗಳೂರು ಅಗಸ್ಟ್ 01: ಮಂಗಳೂರು ನಗರದ ಪಣಂಬೂರು ಸಮೀಪದ ತೋಟ ಬೆಂಗ್ರೆ ಬೀಚ್ನಲ್ಲಿ 2018ರಲ್ಲಿ ನಡೆದಿದ್ದ ಭೀಕರ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜುಲೈ 30, 2026 ರಂದು ಮಹತ್ವದ ತೀರ್ಪು ನೀಡಿದ್ದು, ತಪ್ಪಿತಸ್ಥ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ನವೆಂಬರ್ 18, 2018 ರಂದು ಯುವತಿಯೊಬ್ಬರು ತಮ್ಮ ಪುರುಷ ಸ್ನೇಹಿತನೊಂದಿಗೆ ತೋಟ ಬೆಂಗ್ರೆಗೆ ತೆರಳಿದ್ದರು. ಈ ವೇಳೆ ತೋಟ ಬೆಂಗ್ರೆ ನಿವಾಸಿಗಳು ಹಾಗೂ ವೃತ್ತಿಯಲ್ಲಿ ಮೀನುಗಾರರಾಗಿದ್ದ ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲಿಯನ್ (28) ಮತ್ತು ಅಬ್ದುಲ್ ರಿಯಾಜ್ (40) ಹಾಗೂ ಮೂವರು ಅಪ್ರಾಪ್ತರು ಯುವತಿಯ ಸ್ನೇಹಿತನ ಮೇಲೆ ಭೀಕರ ಹಲ್ಲೆ ನಡೆಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದರು.
ಸಂತ್ರಸ್ತೆ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ (IPC) ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ (Special Public Prosecutor) ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಈ ಕೆಳಗಿನಂತೆ ಶಿಕ್ಷೆ ಪ್ರಕಟಿಸಿದೆ:
ಐಪಿಸಿ ಸೆಕ್ಷನ್ 376D (ಸಾಮೂಹಿಕ ಅತ್ಯಾಚಾರ): ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ.
ಐಪಿಸಿ ಸೆಕ್ಷನ್ 354: ತಲಾ 1 ವರ್ಷ ಸರಳ ಜೈಲು ಶಿಕ್ಷೆ ಹಾಗೂ ₹5,000 ದಂಡ.
ಐಪಿಸಿ ಸೆಕ್ಷನ್ 506: ತಲಾ 1 ವರ್ಷ ಸರಳ ಜೈಲು ಶಿಕ್ಷೆ ಹಾಗೂ ₹2,000 ದಂಡ.
ಐಪಿಸಿ ಸೆಕ್ಷನ್ 323: ತಲಾ 6 ತಿಂಗಳು ಸರಳ ಜೈಲು ಶಿಕ್ಷೆ ಹಾಗೂ ₹1,000 ದಂಡ.
ಐಪಿಸಿ ಸೆಕ್ಷನ್ 341: ತಲಾ ₹500 ದಂಡ.
ಪ್ರಕರಣದಲ್ಲಿದ್ದ ಮೂವರು ಬಾಲಾಪರಾಧಿಗಳ ವಿಚಾರಣೆ ಬಾಲ ನ್ಯಾಯ ಮಂಡಳಿ (JJB) ಮುಂದೆ ಬಾಕಿ ಇದೆ. ಸುಮಾರು 8 ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ಬಳಿಕ ಸಂತ್ರಸ್ತೆಗೆ ನ್ಯಾಯ ದೊರೆತಂತಾಗಿದೆ.