Connect with us

    DAKSHINA KANNADA

    ಮಂಗಳೂರಿನ ಜನ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ಮಾಡುವ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

    ಮಂಗಳೂರು :“ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ವ್ಯಾಪಾರ ವಹಿವಾಟುಗಳು ಕುಸಿದಿವೆ. ಇಲ್ಲಿ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನ ಬದಲಾವಣೆ ಮಾಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.ಕಾರ್ಯಕರ್ತರ ಸಮಾವೇಶವನ್ನು ಮಂಗಳೂರಿನಲ್ಲೇ ನಡೆಸಲು ತೀರ್ಮಾನ ಮಾಡಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ;
    “ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ಅಸಾಧ್ಯ ಎಂಬುದಿಲ್ಲ. ರಾಜಕಾರಣ ಎಂದರೆ ಸಾಧ್ಯತೆಗಳ ಕಲೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನ ಇಲ್ಲಿ ಬದಲಾವಣೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಈ ಭಾಗದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಇಲ್ಲಿ ಪಾಸಾಗುವ ಯುವಕರು ಮತ್ತು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಸೌದಿಗೆ ಹೋಗುತ್ತಿದ್ದಾರೆ. ಈ ಭಾಗದಲ್ಲಿ ಶಾಂತಿ ಕದಡಲಾಗುತ್ತಿದೆ. ಈ ಭಾಗದಲ್ಲಿ ಅನೇಕ ಮೆಡಿಕಲ್, ಇಂಜಿನಿಯರ್ ಕಾಲೇಜುಗಳಿವೆ. ಅನೇಕ ಮಕ್ಕಳು ಇಲ್ಲಿ ಬಿಜೆಪಿಯ ಧರ್ಮದ ಬಲೆಗೆ ಬಿದ್ದು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಿದೆ. ಅದಕ್ಕಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೊಸ ಆಲೋಚನೆ ಮಾಡುವುದಾಗಿ ಹೇಳಿದ್ದೆವು. ನಿನ್ನೆಯ ಬಜೆಟ್ ನಲ್ಲೂ ಮೀನುಗಾರರು ಹಾಗೂ ಕರಾವಳಿ ಭಾಗದಲ್ಲಿ ಹೊಸ ನೀತಿ ತರಲು ಘೋಷಣೆ ಮಾಡಿದ್ದೇವೆ. ಈ ವಿಚಾರವಾಗಿ ಸಲಹೆ ಕೇಳಲಾಗಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಬೇಕಾಗಿದೆ. ಸಂಜೆ 7 ಗಂಟೆ ನಂತರ ಈ ಭಾಗದ ಪ್ರದೇಶದಲ್ಲಿ ಜನ ಓಡಾಟ ಕಡಿಮೆ ಮಾಡಿದ್ದಾರೆ. ವ್ಯಾಪಾರ ವಹಿವಾಟು ಕುಂಠಿತವಾಗಿದೆ. ವ್ಯಾಪಾರ ವಹಿವಾಟು ಆದಾಗಲೇ ಜನಕ್ಕೆ ಉದ್ಯೋಗ ಸಿಗುತ್ತದೆ.ದೇವಾಲಯಗಳಲ್ಲಿ ಇರುವ ಭಕ್ತಿ ವ್ಯಾಪಾರ ವಹಿವಾಟಿನಲ್ಲೂ ಇರಬೇಕು. ಇನ್ನು ಈ ಭಾಗದ ಬ್ಯಾಂಕುಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜತೆ ವಿಲೀನ ಮಾಡಲಾಗುತ್ತಿದೆ. ಇಲ್ಲದರ ಬಗ್ಗೆ ನಾವು ಗಂಭೀರವಾಗಿ ಗಮನಹರಿಸಬೇಕು.ಇಂದಿನ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿಗಳು, ಮಂತ್ರಿಗಳು ಸೇರಿದಂತೆ ಅನೇಕ ನಾಯಕರು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
    ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ:
    ಜೊರೋಸಾ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಮಾಡುತ್ತಿರಲಿ. ಕಾನೂನಿನ ಪ್ರಕಾರ ಕ್ರಮ ವಹಿಸಲಾಗುತ್ತದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.
    ಮುಸಲ್ಮಾನರಿಗೆ ಶೇ.1ರಷ್ಟು ಅನುದಾನ ನೀಡಬಾರದೇ?
    ದಕ್ಷಿಣ ಕನ್ನಡ ಭಾಗದ ತೆರಿಗೆ ನಮಗೆ ಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೇಳಿದಾಗ ಅವರು ಧ್ವನಿ ಎತ್ತಲಿಲ್ಲ. ನಾವು ಮುಸಲ್ಮಾನರಿಗೆ ಎ,ಟು ಕೊಟ್ಟಿದ್ದೇವೆ. 3.71 ಲಕ್ಷ ಕೋಟಿಯಲ್ಲಿ 3 ಸಾವಿರ ಕೋಟಿ ಶಾಲೆಗಳು ಹಾಗೂ ಇತರೆ ಅಭಿವೃದ್ಧಿಗೆ ನೀಡಿದ್ದೇವೆ. ಬಜೆಟ್ ನಲ್ಲಿ ಶೇ.1 ರಷ್ಟು ಅನುದಾನ ನೀಡಬಾರದೇ? ಬಿಜೆಪಿಯವರು ರಾಜಕಾರಣ ಮಾಡಲಿಕ್ಕೆ ಈ ರೀತಿ ಹೇಳುತ್ತಾರೆ” ಎಂದರು.
    ಸುರೇಶ್ ವಿರುದ್ಧ ಕುಮಾರಸ್ವಾಮಿ ನಿಂತರೂ ಸ್ವಾಗತ:
    ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ನಾನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಅವರನ್ನು ನಿಲ್ಲಿಸಿದಾಗ ಅವರ ವಿರುದ್ಧ ನನ್ನ ತಮ್ಮ ಸ್ಪರ್ಧೆ ಮಾಡಿದ್ದರು. ಆಗಲೂ 1.35 ಲಕ್ಷ ಮತಗಳಿಂದ ಗೆದ್ದಿದ್ದೆವು. ಅವರು ಯಾರನ್ನಾದರೂ ನಿಲ್ಲಿಸಲಿ. ನಮಗೆ ನಮ್ಮ ಮತದಾರರಿದ್ದಾರೆ.
    ಸುರೇಶ್ ಅವರು ದೆಹಲಿಯಲ್ಲಿ ಕೂರುವ ಸಂಸದರಲ್ಲ. ಅವರು ಹಳ್ಳಿಯಲ್ಲಿ ಕೂರುವ ಸಂಸದರು. ಅವರು ಮತದಾರರ ಮನಸ್ಸಿನಲ್ಲಿ ಉತ್ತಮ ಕೆಲಸಗಾರ ಎಂಬ ಭಾವನೆ ಮೂಡಿಸಿದ್ದಾರೆ. ನಮ್ಮ ಕ್ಷೇತ್ರದಿಂದ ದೇವೇಗೌಡರು, ಕುಮಾರಸ್ವಾಮಿ ಅವರೂ ಸೇರಿದಂತೆ ಅನೇಕ ಬೇರೆ ಸಂಸದರೂ ಆಯ್ಕೆಯಾಗಿದ್ದರು. ಅವರಿಗೂ ಸುರೇಶ್ ಗೂ ಏನು ವ್ಯತ್ಯಾಸವಿದೆ ಎಂದು ಜನ ನೋಡಿದ್ದಾರೆ. ಪ್ರತಿ ಹಳ್ಳಿ, ಪ್ರತಿ ಪಂಚಾಯ್ತಿ, ಪ್ರತಿ ರಸ್ತೆ, ಪ್ರತಿ ಮನೆ ಸುರೇಶ್ ಅವರ ಕೆಲಸ ನೋಡಿದೆ. ಇಂದು ಆ ಭಾಗದಲ್ಲಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿದ್ದರೆ, ಬಡವರಿಗೆ ಮನೆ, ನಿವೇಶನ ನೀಡಿದ್ದರೆ, ನರೇಗಾದಲ್ಲಿ ಹಣ ಬಂದಿದ್ದರೆ ಅದು ಸುರೇಶ್ ಅವರ ಕೊಡುಗೆ ಇದೆ. ಮತದಾರರು ಪ್ರಜ್ಞಾವಂತರು. ಅವರು ಯಾರನ್ನೇ ನಿಲ್ಲಿಸಿದರೂ ಮತದಾರರು ಉತ್ತರ ಕೊಡುತ್ತಾರೆ.
    ನನ್ನ ವಿರುದ್ಧ ಚಕ್ರವರ್ತಿ ಅಶೋಕ್ ಕೂಡ ಸ್ಪರ್ಧಿಸಿದ್ದರು. ರಾಜಕಾರಣ ಎಂದರೆ ಜನ ತೀರ್ಮಾನ ಮಾಡುತ್ತಾರೆ. ನಾವು ಯಾಕೆ ಚಿಂತಿಸಬೇಕು. ಕುಮಾರಸ್ವಾಮಿ ಅವರು ಬಂದು ನಿಂತರೂ ನಾವು ಸ್ವಾಗತಿಸುತ್ತೇವೆ” ಎಂದು ತಿಳಿಸಿದರು.
    ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೇಳಿದಾಗ, “ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಮುಗಿದ ನಂತರ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *