LATEST NEWS
ಈ ಬಾರಿ ಲೋಕಸಭಾ ಚುನಾವಣೆ ಫಲಿತಾಂಶ 3 ಗಂಟೆ ತಡ

ಈ ಬಾರಿ ಲೋಕಸಭಾ ಚುನಾವಣೆ ಫಲಿತಾಂಶ 3 ಗಂಟೆ ತಡ
ಬೆಂಗಳೂರು ಎಪ್ರಿಲ್ 9: ಕಳೆದ ಚುನಾವಣೆಗಳ ರೀತಿಯಲ್ಲಿ ಈ ಭಾರಿ ಫಲಿತಾಂಶ ಮಧ್ಯಾಹ್ನದ ಒಳಗೆ ಪ್ರಕಟವಾಗುವುದು ಬಹುತೇಕ ಕಷ್ಟವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ 3 ಗಂಟೆ ತಡವಾಗಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಚುನಾವಣಾ ಆಯೋಗ ಒಂದು ವಿಧಾನಸಭಾ ಕ್ಷೇತ್ರ ಒಂದು ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ತಾಳೆ ಮಾಡಲಾಗುವುದು ಎಂದು ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇವಿಎಂ ಬಳಕೆಯ ಕುರಿತು ಸುಪ್ರೀಂ ಕೋರ್ಟಿಗೆ ದೇಶದ 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು.

ಈ ವೇಳೆ ಪ್ರತಿ ಚುನಾವಣಾ ಕ್ಷೇತ್ರದ ಶೇಕಡ 50 ರಷ್ಟು ಇವಿಎಂ ಗಳನ್ನು ವಿವಿಪ್ಯಾಟ್ ನೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿತ್ತು. ಆದರೆ ಈ ಮನವಿಗೆ ಆಯೋಗ ವಿರೋಧ ವ್ಯಕ್ತಪಡಿಸಿತ್ತು. ಶೇಕಡ 50 ರಷ್ಟು ಮತ ಎಣಿಕೆ ನಡೆಸಿದರೆ ಫಲಿತಾಂಶ ಪ್ರಕಟಿಸಲು 5-6 ದಿನ ಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಈ ಹಿನ್ನಲೆಯಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್ ಒಂದು ವಿಧಾನಸಭಾ ವ್ಯಾಪ್ತಿಯ 5 ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳಲ್ಲಿ ಬಿದ್ದ ಮತಗಳನ್ನು ತಾಳೆ ಮಾಡಬೇಕು ಎಂದು ಆದೇಶಿಸಿದೆ. ಹೀಗಾಗಿ ಫಲಿತಾಂಶ ಪ್ರಕಟ ಮೂರು ಗಂಟೆ ತಡವಾಗಬಹುದು ಎಂದು ಅವರು ಹೇಳಿದರು.