DAKSHINA KANNADA
ಧರ್ಮ ಬಿಟ್ಟು ಧರ್ಮಸಂಕಟದಲ್ಲಿ ಸುಳ್ಯದ ಈ ಕುಟುಂಬಗಳು… ಇದಕ್ಕೆ ಪರಿಹಾರವೇನು?
ಸುಳ್ಯ , ನವೆಂಬರ್ 03: ತನ್ನ ಧರ್ಮದಲ್ಲಿ ತಾರತಮ್ಯವಾಗುತ್ತಿದೆ ಎಂದು ಧರ್ಮ ಬದಲಾಯಿಸಿದ ಕುಟುಂಬಗಳು ಇದೀಗ ಧರ್ಮ ಸಂಕಟದಲ್ಲಿ ಸಿಲುಕಿಕೊಂಡಿದೆ. ಧರ್ಮ ಬದಲಾಯಿಸಿದ ಕಾರಣ ಸಿಗುವ ಸವಲತ್ತುಗಳೂ ಸಿಗದೆ ಪರಿತಪಿಸುವಂತಾಗಿದೆ. ಹೊಸ ಧರ್ಮದಿಂದಲೂ ಸವಲತ್ತಿಲ್ಲ, ಹಳೆ ಧರ್ಮದಲ್ಲು ಸವಲತ್ತೂ ಇಲ್ಲದಂತಾಗಿದೆ. ಈ ಕುಟುಂಬಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಇದು ಸುಳ್ಯ ತಾಲೂಕಿನ ಪಂಜ ಗ್ರಾಮಪಂಚಾಯತ್ ನ ಪಲ್ಲೋಡಿ ಎನ್ನುವ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಕಥೆಯಾಗಿದೆ. 1965 ರ ಸುಮಾರಿಗೆ ಕೇರಳ ರಾಜ್ಯದ ಮಂಜೇಶ್ವರ ಭಾಗದಿಂದ ಬಂದಿರುವ ಪರಿಶಿಷ್ಟ ಪಂಗಡದಲ್ಲಿ ಬರುವ ಕೊರಗ ಸಮುದಾಯದ ಈ ಕುಟುಂಬಗಳು ಪಂಜ ಗ್ರಾಮಪಂಚಾಯತ್ ನ ಪಲ್ಲೋಡಿ ಎನ್ನುವ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಆ ಕಾಲದಲ್ಲಿ ಜಾತಿ ವ್ಯವಸ್ಥೆಯು ಅತ್ಯಂತ ಕಠೋರ ರೀತಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಕೊರಗ ಸಮುದಾಯದ ಈ ಕುಟುಂಬಗಳ ಮೇಲೆ ಮೇಲ್ವರ್ಗದವರಿಂದ ಶೋಷಣೆಗಳು ನಡೆಯುತ್ತಿತ್ತು.
ಈ ಕುಟುಂಬಗಳ ಮೇಲಾಗುತ್ತಿದ್ದ ಶೋಷಣೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಅಂದಿನ ಪಂಜ ಚರ್ಚ್ ನ ಧರ್ಮಗುರುಗಳು ಇಲ್ಲಿನ ಹತ್ತಾರು ಕೊರಗ ಕುಟುಂಬಗಳನ್ನು ಧರ್ಮಪರಿವರ್ತನೆ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದರು. ಅಲ್ಲದೆ ಪರ್ಲೋಡಿಯಲ್ಲಿ ಚರ್ಚ್ ವತಿಯಿಂದಲೇ ಪುಟ್ಟ ಮನೆಗಳನ್ನು ನಿರ್ಮಿಸಿ, ಮನೆಯೊಳಗೆ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ವಸ್ತುಗಳನ್ನು ನೀಡಿದ್ದರು.
ಆ ಸಂದರ್ಭದಲ್ಲಿ ಸ್ಥಳೀಯ ಮಂಡಲ ಪಂಚಾಯತ್ ನಿಂದ ಸರ್ಕಾರದ ಸೌಲಭ್ಯಗಳನ್ನೂ ಈ ಕುಟುಂಬಕ್ಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಇದೀಗ ಈ ಕುಟುಂಬಗಳ ದಾಖಲೆ ಪತ್ರಗಳಲ್ಲಿ ಗೊಂದಲವಿರುವ ಕಾರಣಕ್ಕಾಗಿ ಸರಕಾರಿ ಸೌಲಭ್ಯಗಳನ್ನು ನೀಡಲು ಸ್ಥಳೀಯ ಗ್ರಾಮಪಂಚಾಯತ್ ಹಿಂದೇಟು ಹಾಕುತ್ತಿದೆ. ಈ ಕುಟುಂಬ ಸದಸ್ಯರ ಆಧಾರ್ ಕಾರ್ಡುಗಳಲ್ಲಿ ಕೆಲವರ ಹೆಸರು ಕ್ರಿಶ್ಚಿಯನ್ ಹೆಸರಾಗಿದ್ದರೆ, ಇನ್ನು ಕೆಲವರ ಹೆಸರು ಹಿಂದೂ ಹೆಸರುಗಳಾಗಿವೆ. ಪರಿಶಿಷ್ಟ ಪಂಗಡಗಳಿಗೆ ಸರಕಾರದಿಂದ ನೀಡುವ ಸೌಲಭ್ಯಗಳು ಧರ್ಮಪರಿವರ್ತನೆಯ ಕಾರಣದಿಂದ ಈ ಕುಟುಂಬಗಳಿಗೆ ಸಿಗದಂತಾಗಿದೆ.
ಸರಕಾರದ ಮನೆ ಯೋಜನೆಯನ್ನೂ ಪಡೆದುಕೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿ ಈ ಕುಟುಂಬಗಳಿವೆ. ಈ ಕುಟುಂಬಗಳ ಜೊತೆಗೆ ಸ್ಥಳೀಯ ಪಂಚಾಯತ್ ಗೂ ಈ ಕುಟುಂಬಗಳಿಗೆ ಯಾವ ಯೋಜನೆಯಡಿ ಮನೆ ಸೌಲಭ್ಯ ನೀಡುವುದು ಎನ್ನುವ ಗೊಂದವಿದೆ. ಕೊರಳಿಗೆ ಶಿಲುಬೆ ಮಾಲೆ ಹಾಕಿ, ಮನೆಯ ಗೋಡೆಗೆ ಶಿಲುಬೆಯನ್ನು ನೇತಾಡಿಸಿರುವುದನ್ನು ಬಿಟ್ಟರೆ ಈ ಕುಟುಂಬಗಳನ್ನು ಅಧಿಕೃತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ಈ ಕುಟುಂಬಗಳಿಗೆ ಪರಿಶಿಷ್ಟ ಪಂಗಡಗಳಿಗೆ ನೀಡುವ ಸೌಲಭ್ಯವೂ ಇಲ್ಲ, ಅಲ್ಪಸಂಖ್ಯಾತ ವರ್ಗಕ್ಕೂ ನೀಡುವ ಸೌಲಭ್ಯವೂ ಇಲ್ಲದಂತಾಗಿದೆ.
ತಮ್ಮ ಅರಿವಿಗೆ ಬಂದೋ, ಬಾರದೆಯೋ ಈ ಕುಟುಂಬಗಳು ತಮ್ಮ ಮೂಲಧರ್ಮದಿಂದ ಹೊರ ನಡೆದು ಇನ್ನೊಂದು ಧರ್ಮವನ್ನು ಸ್ವೀಕರಿಸಿದೆ. ಆಗಿನ ಮಂಡಲ ಪಂಚಾಯತ್ ಈ ಕುಟುಂಬಗಳಿಗೆ ಸರಕಾರದಿಂದ ಬರುವ ಎಲ್ಲಾ ಸೌಕರ್ಯಗಳನ್ನೂ ನೀಡಿದೆ. ಆದರೆ ಇದೀಗ ಸರಕಾರಿ ಸೌಲಭ್ಯ ಪಡೆಯುವ ವ್ಯವಸ್ಥೆಗಳಲ್ಲಿ ಬದಲಾವಣೆಯಾದ ಕಾರಣ ದಾಖಲೆ ಪತ್ರಗಳು ಸರಿಯಿಲ್ಲದ ಈ ಕುಟುಂಬಗಳಿಗೆ ಯಾವ ಸೌಲಭ್ಯಗಳನ್ನೂ ನೀಡಲು ನಿಯಮದ ಪ್ರಕಾರ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವಂತಹ ಜ್ಞಾನವೂ ಈ ಬಡ ಕುಟುಂಬಗಳ ಸದಸ್ಯರಲ್ಲಿ ಇಲ್ಲದ ಕಾರಣ ಈ ಕುಟುಂಬಗಳು ಪರದಾಡುವ ಸ್ಥಿತಿಗೆ ತಲುಪಿದೆ.
ಕಾಡಿನಲ್ಲಿ ಅಲೆದಾಡಿ ಸಿಗುವ ಕಾಡು ಬಳ್ಳಿಗಳನ್ನು ಸಂಗ್ರಹಿಸಿ ಈ ಕುಟುಂಬಗಳ ಬುಟ್ಟಿ ಹಾಗು ಇತರ ವಸ್ತುಗಳನ್ನು ತಯಾರಿಸುತ್ತಿದ್ದು, ಇವುಗಳ ಮಾರಾಟದಿಂದ ಬದುಕು ಸಾಗಿಸಬೇಕಿದೆ. ಕರಾವಳಿಯ ಮೂಲ ನಿವಾಸಿಗಳೆಂದು ಗುರುತಿಸಲ್ಪಡುತ್ತಿರುವ ಈ ಕೊರಗ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮರೆಯಾಗುತ್ತಿವೆ.
ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಈ ಕುಟುಂಬಗಳು ಎದುರಿಸುತ್ತಿದ್ದು, ಮಾನವೀಯ ನೆಲೆಯಲ್ಲಾದರೂ, ಇವರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವ ಒತ್ತಡವೂ ಕೇಳಿ ಬರುತ್ತಿದೆ. ಕೇವಲ ಕೊರಳಿಗೆ ಮಾಲೆಯನ್ನು ಹಾಕಿ ತಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನಸ್ಥಿತಿಯಿಂದಾಗಿ ಪಂಜದ ಈ ಕೊರಗ ಕುಟುಂಬಗಳು ಸರಕಾರಿ ಅವಕಾಶಗಳಿಂದ ವಂಚಿತವಾಗಿದೆ. ಸರಕಾರ ಈ ಕುಟುಂಬಗಳ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಿ ಸಮಸ್ಯೆ ಬಗೆಹರಿಸಬೇಕಿದೆ.