DAKSHINA KANNADA
ಸುಳ್ಯ: ಮರೀಚಿಕೆಯಾದ ರಸ್ತೆ ಅಭಿವೃದ್ಧಿ, ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಸುಳ್ಯ, ಜೂನ್ 11: ಅರಂತೋಡು- ಎಲಿಮಲೆ ರಸ್ತೆಯ ಅಭಿವೃದ್ಧಿ ಆಗದೆ ಇರುವುದನ್ನು ವಿರೋಧಿಸಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ಈ ಬಗ್ಗೆ ಬ್ಯಾನರ್ ಅಳವಡಿಸಿದ್ದಾರೆ.
‘ಸುಳ್ಯ ತಾಲ್ಲೂಕಿನಲ್ಲಿ ಅತಿ ಅಗತ್ಯವಾಗಿ ಅಗಲೇಬೇಕಾದ ಕೆಲಸಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಹಳೆಯ ಲೋಕೋಪಯೋಗಿ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅತೀ ಹೆಚ್ಚು ವಾಹನ ಸಾಂದ್ರತೆ ಇರುವ ಕುಕ್ಕೆ ಸುಬ್ರಹ್ಮಣ್ಯವನ್ನು ಅತೀ ಹತ್ತಿರದಿಂದ ಸಂಪರ್ಕಿಸುವ ಮತ್ತು ಇಪ್ಪತ್ತು ವರ್ಷಗಳಿಂದ ಮನವಿ ಮಾಡಿದರೂ ಕಡೆಗಣಿಸಿರುವ ಈ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಅರಂತೋಡು ಗ್ರಾಮದ ಅಡ್ಡಲೆ ವಾರ್ಡಿನ ಮುಂಬರುವ ಎಲ್ಲ ಚುನಾವಣೆಗಳಲ್ಲಿ ನೋಟ ಮತದಾನ ಅಥವಾ ಮತದಾನ ಬಹಿಷ್ಕಾರ ನಿರ್ಧಾರ ಮಾಡಲಾಗಿದೆ’ ಎಂದು ಬ್ಯಾನರ್‌ನಲ್ಲಿ ಬರೆದು ಕೊನೆಗೆ ‘ನೊಂದ ರಸ್ತೆ ಫಲಾನುಭವಿಗಳು’ ಎಂದು ಉಲ್ಲೇಖಿಸಲಾಗಿದೆ.
ಅಡ್ತಲೆ, ಮರ್ಕಂಜ ಭಾಗಗಳಲ್ಲಿ 25ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್ ಅಳವಡಿಸಲಾಗಿದೆ. ರಸ್ತೆ ಅಭಿವೃದ್ಧಿ ಆಗದೆ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರ ಹಿಂಪಡೆಯುವುದಿಲ್ಲ ಎಂದು ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ತಿಳಿಸಿದೆ. ಅರಂತೋಡು ಗ್ರಾಮದ ಅಡ್ತಲೆ ಭಾಗದ ಗ್ರಾಮಸ್ಥರು ಕಳೆದ ಬಾರಿ ಹೋರಾಟ ಸಮಿತಿ ರಚನೆ ಮಾಡಿ ರಸ್ತೆ ಅಭಿವೃದ್ಧಿಗೆ ಒತ್ತಡ ಹೇರಿದ್ದರು. ರಸ್ತೆ ಅಭಿವೃದ್ಧಿಯಾಗದಿದ್ದರೇ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಮಾಡಲಾಗುವುದು ಎಂದು ಬ್ಯಾನರ್ ಅಳವಡಿಸುವುದರ ಜತೆಗೆ ಜಾಲತಾಣದಲ್ಲಿಯೂ ಪೋಸ್ಟರ್ ವೈರಲ್ ಆಗಿದೆ.