LATEST NEWS
ಹೆಣ್ಣುಕೊಟ್ಟ ಅತ್ತೆಯ ಕರಿಮಣಿ ಸರಕ್ಕೆ ಕನ್ನ ಹಾಕಿದ ಅಳಿಯ ಈಗ ಪೊಲೀಸ್ ಅತಿಥಿ

ಮಂಗಳೂರು ಜುಲೈ 24: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಎಂಬಲ್ಲಿ ನಡೆದ ಒಂಟಿ ಮಹಿಳೆಯೊಬ್ಬರ ಕರಿಮಣಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರೇ ಶಾಕ್ ಆಗಿದ್ದು, ,ಸ್ವತಃ ಅಳಿಯನೇ ತನ್ನ ಅತ್ತೆಯ ಕರಿಮಣಿಗೆ ಕದ್ದಿದ್ದಾನೆ.
ಮಂಗಳೂರು ಕಮೀಷನರೇಟ್‌ನ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶ ಕಳೆದ ತಿಂಗಳ ಹಿಂದೆ ಒಂದು ಘಟನೆ ನಡೆದಿತ್ತು. ಒಂಟಿ ಮಹಿಳೆಯ ಮನೆಗೆ ಇಬ್ಬರು ಕಳ್ಳರು ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದರು. ಸಂತ್ರಸ್ಥ ಮಹಿಳೆ ಸುಮತಿ ಆಚಾರ್ಯ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಹೊರಗಿನವರು ಬಂದು ಕೃತ್ಯ ನಡೆಸಿರೋದು ಅಲ್ಲ, ಯಾರೋ ಪರಿಚಿತರೆ ಕೃತ್ಯ ಎಸಗಿದ್ದಾರೆ ಎಂಬ ಸಂಶಯ ಬಂದಿತ್ತು. ಈ ಸಂದರ್ಭ ಸ್ಥಳೀಯ ಸಿ.ಸಿ ಕ್ಯಾಮಾರದಲ್ಲಿ ಕೃತ್ಯ ಎಸಗಿ ಇಬ್ಬರು ಪರಾರಿಯಾಗಿರುವುದು ರೆಕಾರ್ಡ್ ಆಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ ಈ ಕಳ್ಳತನ ಕೃತ್ಯ ನಡೆಸಿರುವುದು ಎಂದು ಕಂಡು ಬಂತು. ಸದ್ಯ ಮಹಿಳೆಯ ಅಳಿಯ ವಿನಯ್ ಕುಮಾರ್, ಆತನ ಜೊತೆಗಿದ್ದ ಮಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿನಯ್ ಕುಮಾರ್ ಸುರತ್ಕಲ್‌ನ ಕೃಷ್ಣಾಪುರ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಕೌಟುಂಬಿಕ ವ್ಯತ್ಯಾಸ ಇರುವ ಹಿನ್ನಲೆಯಲ್ಲಿ ಈ ಕೃತ್ಯವನ್ನು ಅಳಿಯ ಎಸಗಿದ್ದಾನೆ ಎಂದು ತನಿಖೆ ಸಂದರ್ಭ ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಸುಮತಿ ಆಚಾರ್ಯರ ಬಾಯಿಗೆ ಬಟ್ಟೆಕಟ್ಟಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದು ಏಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳಿಂದ 60 ಸಾವಿರ ಮೌಲ್ಯದ 32 ಗ್ರಾಂ ತೂಕದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಅಳಿಯನೇ ಕಳ್ಳತನ ಕೃತ್ಯ ನಡೆಸಿರುವ ಬಗ್ಗೆ ಅತ್ತೆ ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಿನಲ್ಲಿ ಹೆಣ್ಣು ಕೊಟ್ಟ ಮನೆಗೆ ಕನ್ನ ಹಾಕಲು ಬಂದು ಅಳಿಯ ಈಗ ಅಂದರ್ ಆಗಿದ್ದಾನೆ.