DAKSHINA KANNADA
ಲಾಕ್ ಡೌನ್ ನಡುವೆ ಸರಣಿ ಕಳ್ಳತನದ ಆರೋಪಿ ಬಂಧಿಸಿದ ಕಡಬ ಪೊಲೀಸರು
ಲಾಕ್ ಡೌನ್ ನಡುವೆ ಸರಣಿ ಕಳ್ಳತನದ ಆರೋಪಿ ಬಂಧಿಸಿದ ಕಡಬ ಪೊಲೀಸರು
ಪುತ್ತೂರು ಎಪ್ರಿಲ್ 29: ದಕ್ಷಿಣಕನ್ನಡ ಜಿಲ್ಲೆಯ ಕಡಬದ ರಾಮಕುಂಜದಲ್ಲಿ ಕೊರೊನಾ ಲಾಕ್ ಡೌನ್ ಸಂದರ್ಭ ನಡೆದ ಸರಣಿ ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಸಜಿಪನಡು ಪೆರುವ ಮನೆ ನಿವಾಸಿ ಉಮ್ಮಾರ್ ಫಾರೂಕ್ ಎಂದು ಗುರುತಿಸಲಾಗಿದೆ. ಈತ ಲಾಕ್ ಡೌನ್ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ಎಸ್.ಬಿ.ಐ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಕಾಲೇಜು, ಪಂಚಾಯತ್ಗಳಲ್ಲಿ ಸರಣಿ ಕಳ್ಳತನ ನಡೆಸಿದ್ದ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಆತೂರು ಬಸ್ ನಿಲ್ದಾಣದಲ್ಲಿ ಸೆರೆ ಸಿಕ್ಕಿದ್ದಾನೆ. ಈತನ ಮೇಲೆ ಕಡಬ ಸೇರಿದಂತೆ ವಿವಿಧ ಠಾಣೆಯಲ್ಲಿ ಒಟ್ಟು 16 ಪ್ರಕರಣ ದಾಖಲಾಗಿವೆ. ಈ ಸರಣಿ ಕಳ್ಳತನದಲ್ಲಿ ಈತ ಹಾಗೂ ಇನ್ನೋರ್ವ ಫಯಾನ್ ಎಂಬಾತ ಪಾಲ್ಗೊಂಡಿದ್ದು, ಫಯಾನ್ ನನ್ನು ಈಗಾಗಲೇ ಮಂಗಳೂರಿನ ಕೊಣಾಜೆ ಠಾಣೆಯ ಪೋಲಿಸರು ಬಂಧಿಸಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಹಣದ ಉದ್ದೇಶದಿಂದ ಕಳ್ಳತನಕ್ಕೆ ಸರಕಾರಿ ಕಛೇರಿ, ಮೊಬೈಲ್ ಅಂಗಡಿಗಳನ್ನೆ ಕಳ್ಳತನಕ್ಕೆ ಆಯ್ಕೆ ಮಾಡಿಕೊಳ್ಳುವ ಚಾಳಿ ಹೊಂದಿರುವುದಾಗಿ ತನಿಖೆಯ ವೇಳೆ ಪೋಲಿಸರಿಗೆ ಬಾಯಿ ಬಿಟ್ಟಿದ್ದಾನೆ. ಬಂಧಿತನಿಂದ ಕಳ್ಳತನಕ್ಕೆ ಬಳಸಿದ್ದ ರಾಡ್, ಅಲ್ಲದೆ ಕೆಲವು ಸಾಮಾಗ್ರಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.