DAKSHINA KANNADA
ಮಂಗಳೂರು: ಆಡಿನ ಮರಿ ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಯುವಕ
ಮಂಗಳೂರು, ಜನವರಿ 03: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ 21 ವರ್ಷದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿದ್ದಾನೆ. ಅವನಿಗೆ ಆಡಿನ ಮರಿಯ ಮೇಲೆ ಕನಿಕರ ಹುಟ್ಟಿದೆ. ಅದನ್ನು ಕಾಪಾಡಲು ಹೋಗಿದ್ದಾನೆ.
ಅದನ್ನು ರಕ್ಷಿಸುತ್ತಿರುವಾಗಲೇ ರೈಲು ಬಂದುಬಿಟ್ಟಿದೆ. ಚೇತನ್ ಕಾಲಿನ ಮೇಲೆ ರೈಲು ಹರಿದ ಕಾರಣ, ಎರಡೂ ಕಾಲುಗಳು ಛಿದ್ರ ಛಿದ್ರವಾಗಿದ್ದವು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಾಲುಗಳನ್ನು ಕಟ್ ಮಾಡಲಾಗಿತ್ತು.
ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಚೇತನ್ ಎರಡೂ ಕಾಲುಗಳನ್ನು ಕಳೆದುಕೊಂಡು ಖಿನ್ನತೆಗೆ ಜಾರಿದ್ದ.
ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚೇತನ್ ಕುಟುಂಬದ ಆಧಾರವಾಗಿದ್ದ. ಆದರೆ ಈಗ ಕೆಲಸಕ್ಕೂ ಹೋಗಲಾರದ ಸ್ಥಿತಿಯಲ್ಲಿ ಎಲ್ಲದಕ್ಕೂ ಕುಟುಂಬಸ್ಥರನ್ನು ಅವಲಂಬಿಸಬೇಕಾಗಿ ಬಂದಿದ್ದರಿಂದ ಆತ ಮಾನಸಿಕವಾಗಿ ನರಳತೊಡಗಿದ. ನಂತರ ಅನಾರೋಗ್ಯ ತೀವ್ರವಾಗಿ ಬಾಧಿಸಿತ್ತು. ಆತನನ್ನು ಪುನಃ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತಪಟ್ಟಿದ್ದಾನೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತನನ್ನು ಬದುಕಿಸಿಕೊಳ್ಳಲು ಗೆಳೆಯರು ಬೀದಿ ಬದಿ ಹಣ ಸಂಗ್ರಹಿಸಿದಲ್ಲದೆ, ದಾನಿಗಳು ತಮ್ಮಿಂದಾದಷ್ಟು ಹಣ ನೀಡಿ ಸಹಕರಿಸಿದ್ದರು. ಆದರೆ ವಿಧಿಯ ಮುಂದೆ ಯಾವುದು ಫಲ ಕೊಡಲಿಲ್ಲ.