Connect with us

    DAKSHINA KANNADA

    ರಾಜ್ಯ ಸರಕಾರ ಸುಳ್ಳನ್ನು ಸತ್ಯ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ, ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟುವಲ್ಲಿ ಸರಕಾರ ವಿಫಲ: ಮಾಜಿ ಶಾಸಕ ಸಂಜೀವ ಮಠಂದೂರು

    ಪುತ್ತೂರು, ಜುಲೈ 11: ರಾಜ್ಯಸರಕಾರ, ಸಚಿವರು ಸೇರಿದಂತೆ ಶಾಸಕರು ಅಭಿವೃದ್ಧಿಯ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಸುಳ್ಳನ್ನು ಸತ್ಯ ಎಂದು ಬಿಂಬಿಸುತ್ತಿದ್ದು, ಜನತೆ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಪುತ್ತೂರು ತಾಲೂಕಿನ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪುತ್ತೂರು ಶಾಸಕರು, ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಮನೆ ಮಂಜೂರುಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದು, ಈ ರೀತಿ ತಪ್ಪು ಸಂದೇಶ ನೀಡುವುದನ್ನು ಬಿಟ್ಟು ರಾಜ್ಯ ಸರಕಾರ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದರ ನೈಜಾಂಶವನ್ನು ಜನತೆಗೆ ತಿಳಿಸಲಿ ಎಂದು ಸವಾಲೆಸೆದರು.

    2022 ರಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭ 5 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ. ಹಾಗೆ ನನ್ನ ಶಾಸಕತ್ವದ ಅವಧಿಯಲ್ಲಿ ತಾಲೂಕಿಗೆ ಅರ್ಹ, ನೈಜ ಫಲಾನುಭವಿಗಳಿಗೆ 1150 ಮನೆಗಳನ್ನು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರಕ್ಕೆ 250 ಮನೆಗಳು ಸೇರಿದಂತೆ 1400 ಮನೆಗಳನ್ನು ಹಂಚುವ ಕೆಲಸ ಮಾಡಿದೆ. ಈ ವಿಷಯವನ್ನು ಈಗಿನ ಶಾಸಕರು ಮರೆಮಾಚುವ ಕೆಲಸ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರಸ್ತುತ ಡೆಂಗ್ಯೂ ಜ್ವರ ರಾಜ್ಯದಲ್ಲಿ ಕೋವಿಡ್ ರೀತಿಯಲ್ಲಿ ಹರಡುತ್ತಿದ್ದು, ಜನರ ಜೀವಕ್ಕೆ ಅಪಾಯ ತಂದೊಡ್ಡುವ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಸರಕಾರ ಗಾಢ ನಿದ್ರೆಯಲ್ಲಿದೆ. ಆರೋಗ್ಯ ಸುಧಾರಣೆ ಆಗಿಲ್ಲ. ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ರಾಜಕಾರಣದಲ್ಲಿ ತಲ್ಲೀನವಾಗಿದೆ. ತಕ್ಷಣ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದು ಆಗ್ರಹಿಸಿದರು.

    ನಗರದಲ್ಲಿ ಮಳೆಗಾಲ ಪೂರ್ವದ ಒಂದೂ ಕೆಲಸಗಳು ಆಗಿಲ್ಲ. ರಸ್ತೆ ಬದಿಗಳಲ್ಲಿ ಗಿಡ ಗಂಟಿಗಳನ್ನು ತೆಗೆಯುವ ಪರಿಸ್ಥಿತಿಯಲ್ಲಿ ನಗರಸಭೆ ಇಲ್ಲ. ಈ ಕುರಿತು ನಗರಸಭೆ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಿಂಗಳು ಮೂರು ಕಳೆದಿದೆ. ಆದರೂ ಕ್ರಮ ಕೈಗೊಂಡಿಲ್ಲ. ನಗರಸಭೆ ಅಧೋಗತಿಗೆ ಬಂದಿದೆ. ನಗರಸಭೆ ಅಧಿಕಾರವನ್ನು ಮೊಟಕು ಕೆಲಸ ಆಗುತ್ತಿದೆ. ಕ್ರಿಯಾ ಯೋಜನೆಯನ್ನು ಬದಲಾಯಿಸಲು ಹೊರಟಿದೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಲ್ಲವೇ ಎಂದು ಪ್ರಶ್ನಿಸಿದ ಅವರು, ತಕ್ಷಣ ಅಧ್ಯಕ್ಷತೆಗೆ ಚುನಾವಣೆ ನಡೆಸಬೇಕಾಗಿದೆ ಎಂದು ಸಂಜೀವ ಮಠಂದೂರು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಬನ್ನೂರು ಗ್ರಾಪಂ ಮಾಜಿ ಅಧ್ಯಕ್ಷೆ ಜಯ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ, ಕಬಕ ಗ್ರಾಪಂ ಮಾಜಿ ಅಧ್ಯಕ್ಷ ವಿನಯಕುಮಾ‌ರ್ ಕಲ್ಲೇಗ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply