Connect with us

    DAKSHINA KANNADA

    ಮಂಗಳೂರು ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರದ ವಾಸನೆ, ತನಿಖೆಗೆ ಆದೇಶ..!

    ಮಂಗಳೂರು :  ಮಂಗಳೂರು ಆಯುಷ್ ಆಸ್ಪತ್ರೆಯ( Mangalore AYUSH Hospital) ಉಪಕರಣ ಖರೀದಿಯಲ್ಲೂ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿದಿದ್ದು ಈ ಬಗ್ಗೆ ತನಿಖೆ ನಡೆಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

    ಆಯುಷ್ ಆಸ್ಪತ್ರೆಗೆ ಸಿ.ಎಸ್.ಆರ್ ಅಡಿಯಲ್ಲಿ ಉಪಕರಣ ಖರೀದಿ ಪ್ರಕರಣ – ಪ್ರಧಾನ ಕಾರ್ಯದರ್ಶಿಗಳ ಮಟ್ಟದ ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವರು

    ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಗೆ 28 ಲಕ್ಷ ವೆಚ್ಚದ ಸಿಎಸ್.ಆರ್ ಯೋಜನೆಯ ಪ್ರಕರಣ ಇದೀಗ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಂಗಳದಲ್ಲಿದೆ. ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೂಲಂಕುಷವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಆದೇಶಿಸಿದ್ದಾರೆ.

    ಪ್ರಕರಣ ಕುರಿತಂತೆ ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ ಖುದ್ದು ಸಚಿವರನ್ನ ಭೇಟಿ ಮಾಡಿ ಉದ್ದೇಶಪೂರ್ವಕವಾಗಿ ಆರೋಪಗಳನ್ನ ಹೊರಿಸಲಾಗುತ್ತಿದ್ದು, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.‌ ಸಾಮಾಜಿಕ ಕಾರ್ಯಕರ್ತ ವಾಸುದೇವ್ ಹೊಳ್ಳ, ಜಿ.ಎಸ್.ಡಿ ಪಾಣಿ, ಕಿರಣ್ ಪೂಜಾರಿ ಎಂಬುವರು ದುರುದ್ದೇಶ ಹೊಂದಿದ್ದು, ಆಯುಷ್ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದಾರೆ. ಅನಗತ್ಯ ದೂರುಗಳನ್ನ ಸಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ. ಸಿಎಸ್.ಆರ್ ಯೋಜನೆಯ ಮೂಲಕ ಹಣವನ್ನ ತಂದು ಆಯುಷ್ ಆಸ್ಪತ್ರೆಗೆ
    ಗೆ ಮೂಲಸೌಕರ್ಯ ಒದಗಿಸಲು ಶ್ರಮ ವಹಿಸಲಾಗಿತ್ತು. ಆದರೆ ಈ ಮೂವರು ತಮ್ಮ ವಯಕ್ತಿಕ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರಿ ಕಾರ್ಯಕ್ಕೆ ಅಡ್ಡಿಯುಂಟುಮಾಡಿದ್ದಾರೆ ಎಂದು ದೂರಿದ್ದರು.

    ಇನ್ನೊಂದಡೆ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವು ಕೇಳಿಬಂದಿತ್ತು. ಆರೋಪ ಪ್ರತ್ಯಾರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ಕೂಲಂಕುಷ ತನಿಖೆಗೆ ಆರೋಗ್ಯ ಸಚಿವರು ಆದೇಶಿಸಿದ್ದಾರೆ.‌ಆರೋಪದಲ್ಲಿ ಸತ್ಯಾಸತ್ಯತೆ ಇದೆಯೇ ಅಥವಾ ಉದ್ದೇಶಪೂರ್ವಕವಾಗಿ ದೂರು ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಆಯುಷ್ ಅಧಿಕಾರಿಗಳು ತಪ್ಪು ಎಸಗಿದ್ದರೆ ಸೂಕ್ತ ಶಿಸ್ತುಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿ. ಒಂದು ವೇಳೆ ಆಯುಷ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ದುರುದ್ದೇಶದಿಂದ ದೂರುದಾರರು ಆರೋಪಗಳನ್ನ ಮಾಡಿದ್ದಾರೆ ಎಂದು ಕಂಡುಬಂದರೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಆದೇಶದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಸೂಚಿಸಿದ್ದಾರೆ..

    Share Information
    Advertisement
    Click to comment

    Leave a Reply

    Your email address will not be published. Required fields are marked *