LATEST NEWS
ಪಹಲ್ಗಾಮ್ ದಾಳಿ ನಾನು ಮಾಡಿಲ್ಲ ಎಂದು ಉಲ್ಟಾ ಹೊಡೆದ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್

ನವದೆಹಲಿ ಎಪ್ರಿಲ್ 26: ಕಾಶ್ಮೀರದ ಪೆಹಲ್ಗಾಮ್ ನಲ್ಲಿ 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಭಯೋತ್ಪಾದಕ ದಾಳಿಯನ್ನು ನಾನು ಮಾಡಿಲ್ಲ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್(TRF) ತಿಳಿಸಿದ್ದು, ಮೊದಲು ನಾನೇ ಮಾಡಿದ್ದು ಎಂದು ಹೇಲಿದ್ದ ಭಯೋತ್ಪಾದಕ ಸಂಘಟನೆ ಇದೀಗ ಉಲ್ಟಾ ಹೊಡೆದಿದ್ದು, ಈ ದಾಳಿಯಲ್ಲಿ ತನ್ನ ಪಾತ್ರ ಎಂದು ಪ್ರತಿಪಾದಿಸಿದೆ.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ(LeT)ಗೆ ಎಂದು ಅಂಗ ಸಂಘಟನೆ ಟಿಆರ್ಎಫ್, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ನಿರಾಕರಿಸಿ ಆನ್‌ಲೈನ್ ಹೇಳಿಕೆ ಬಿಡುಗಡೆ ಮಾಡಿದೆ.
ಈ ಮೊದಲು ಭಯೋತ್ಪಾದಕ ದಾಳಿಯನ್ನು ನಾನೇ ಮಾಡಿದ್ದು ಎಂದು ಹೇಳಿತ್ತು, ಭಯೋತ್ಪಾದಕ ದಾಳಿಯ ಹೊಣೆಯನ್ನು TRF ಹೊತ್ತುಕೊಂಡಿತ್ತು. ಆದರೆ ಇದೀಗ ಭಯೋತ್ಪಾದಕ ದಾಳಿಯ ಕುರಿತಂತೆ ಇಡೀ ವಿಶ್ವದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೇ ಮೊದಲ ಬಾರಿಗೆ ಎಂಬಂತೆ ಕಾಶ್ಮೀರದಲ್ಲೂ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದು ಭಯೋತ್ಪಾದಕ ಸಂಘಟನೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದಾಳಿಯ ವಿರುದ್ಧ ಕಣಿವೆಯಾದ್ಯಂತ ಭುಗಿಲೆದ್ದ ಕಾಶ್ಮೀರಿಗಳ ಬೃಹತ್ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು TRF ಈಗ ತನ್ನ ಪಾತ್ರವನ್ನು ನಿರಾಕರಿಸುತ್ತಿದೆ ಎಂದು ಭದ್ರತಾ ಮತ್ತು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

“ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ, ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ತಾನು ಭಾಗಿಯಾಗಿರುವುದನ್ನು ರೆಸಿಸ್ಟೆನ್ಸ್ ಫ್ರಂಟ್(TRF) ನಿಸ್ಸಂದಿಗ್ಧವಾಗಿ ನಿರಾಕರಿಸುತ್ತದೆ. ಈ ಕೃತ್ಯವನ್ನು TRF ಮಾಡಿದ ಎಂದು ಆರೋಪಿಸುವುದು ಸುಳ್ಳು, ಆತುರ ಮತ್ತು ಕಾಶ್ಮೀರಿ ಪ್ರತಿರೋಧವನ್ನು ಕೆಣಕಲು ಆಯೋಜಿಸಲಾದ ಅಭಿಯಾನದ ಭಾಗವಾಗಿದೆ” ಎಂದು ಭಯೋತ್ಪಾದಕ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದೆ.
ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಪಹಲ್ಗಾಮ್ ದಾಳಿಯ ನಂತರ ಹೊಣೆ ಹೊತ್ತುಕೊಂಡ “ಅನಧಿಕೃತ” ಸಂದೇಶವನ್ನು ಪೋಸ್ಟ್ ಮಾಡಲಾಗಿದೆ ಎಂದು ಟಿಆರ್ ಎಫ್ ಹೇಳಿದೆ.
“ಆಂತರಿಕ ಪರಿಶೋಧನೆಯ ನಂತರ, ಇದು ಸಂಘಟಿತ ಸೈಬರ್ ಅಪರಾಧದ ಪರಿಣಾಮ ಎಂದು ನಮಗೆ ತಿಳಿದು ಬಂದಿದೆ. ಅನಧಿಕೃತವಾಗಿ ಪೋಸ್ಟ್ ಮಾಡಿರುವುದನ್ನು ಪತ್ತೆಹಚ್ಚಲು ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಮತ್ತು ಆರಂಭಿಕ ತನಿಖೆಯಲ್ಲಿ ಇದು ಭಾರತೀಯ ಸೈಬರ್-ಗುಪ್ತಚರ ಕಾರ್ಯಕರ್ತರ ಕೈವಾಡವನ್ನು ಸೂಚಿಸುತ್ತದೆ” ಎಂದು ಭಯೋತ್ಪಾದಕ ಸಂಘಟನೆ ತಿಳಿಸಿದೆ.