Connect with us

    DAKSHINA KANNADA

    ಬಂದರು ನಗರಿ ಮಂಗಳೂರಿಗೆ ಕಾಡಿದೆ ಕಂಟಕ, ಅರಣ್ಯ ನಾಶದಿಂದ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..!

    ಮಂಗಳೂರು : ಬಂದರು ನಗರಿ ಮಂಗಳೂರಿನ ಜನರಿಗೆ ಕಾಡಲಿದೆ ಭಾರೀ ಅನಾಹುತ. ಹೌದು ಇತ್ತೀಚೆಗೆ ನಡೆದ ಸರ್ವೆಯೊಂದರಲ್ಲಿ ಈ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದ್ದು ಜೀವಸಂಕುಲದ ವಿನಾಶಕ್ಕೆ ಹಾದಿ ಮಾಡಿಕೊಟ್ಟಿದೆ.


    ಕಳೆದ ಮೂರು ದಶಕಗಳ ಹಿಂದೆ ಪರಶುರಾಮ ಸೃಷ್ಟಿಯ ತುಳುನಾಡಿನ ಪ್ರಮುಖ ನಗರಿ ಮಂಗಳೂರು ಪ್ರಕೃತಿ ಮಾತೆಯ ಹಸಿರು ಹೊದಿಕೆಯಲ್ಲಿ ಹೊದ್ದು ಮಲಗಿತ್ತು. ಕಣ್ಣೂ ಹಾಯಿದಷ್ಟು ದೂರ ಹಸೀರೇ ಹಸಿರಾಗಿತ್ತು, ನೀರು ಯತೇಷ್ಟವಾಗಿದ್ದರೆ, ಮಣ್ಣು ಸಮೃದ್ದವಾಗಿತ್ತು. ಇದರಿಂದ ಇಲ್ಲಿನ ಪರಿಸರ ಕೂಡ ಅಷ್ಟೇ ತಂಪಾಗಿತ್ತು. ಆದ್ರೆ ಇದೀಗ ಐತಿಹಾಸಿಕ ಸುಂದರ ಬಂದರು ನಗರಿ ಬರಡಾಗಿದೆ, ತಾಪಮಾನ ಏರಿ ಭೂಮಿ ಬಿಸಿಯಾಗುತ್ತಿದ್ದು, ನೀರು ಸಂಪೂರ್ಣ ಮಾಯವಾಗುವ ಭೀತಿಯಲ್ಲಿದೆ.ಇದಕ್ಕೆಲ್ಲಾ ಪ್ರಮುಖ ಕಾರಣ ಪರಿಸರ, ಅರಣ್ಯ ಭೂಮಿ ನಗರವಾಸಿಗಳ ಸ್ವಾರ್ಥಕ್ಕೆ ಬಲಿಯಾಗಿರುವುದು.ನಗರದ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕಾಗಿದ್ದ ಮಂಗಳೂರು ಮಹಾನಗರ ಪಾಲಿಕೆ ಹಸೀರೆ ಉಸಿರು ಎಂಬ ಮಾತನ್ನು ಎಂದೋ ಮರೆತಂತಿದೆ. ಅರಣ್ಯವನ್ನು ರಕ್ಷಿಸಿ, ಪರಿಸರ ಸಂರಕ್ಷಿಸಿ ಎಂಬ ಬರಹಗಳು ಕೇವಲ ಬ್ಯಾನರ್, ಪ್ಲೆಕ್ಸ್ ಗಳಿಗೆ ಸೀಮಿತವಾದಂತಿದೆ. ಅರಣ್ಯವಿಲ್ಲದಿದ್ದರೆ ನಾವಿಲ್ಲ ಎಂಬ ಮಾತಿನ ಸತ್ಯವಾಗಿದ್ದರೂ, ಅರಣ್ಯವನ್ನುಳಿಸಲು ಆಡಳಿತ ವ್ಯವಸ್ಥೆ ಜಾಣ ಕುರುಡನಂತಾಗಿದೆ.


    ತಾಪಮಾನ ಹೆಚ್ಚಳ, ವಿಷಪೂರಿತ ವಾತಾವರಣ ಮೊದಲಾದ ಸಮಸ್ಯೆಗಳನ್ನು ಇಂದು ಎದುರಿಸುತ್ತಿರುವ ದೂರದ ದೆಹಲಿ, ಬೆಂಗಳೂರು ಮೊದಲಾದ ನಗರಗಳ ಸಾಲಿಗೆ ಮಂಗಳೂರು ಕೂಡಾ ಶೀಘ್ರವೇ ಸೇರ್ಪಡೆಗೊಳ್ಳಲಿದೆ.
    ಹೌದು ಇದು ಆಶ್ಚರ್ಯ-ಆತಂಕದ ವಿಚಾರವಾದರೂ ಕೂಡಾ ಕಟು ಸತ್ಯ… ಮಂಗಳೂರಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಟ್ರೀ ಕೌಂಟ್ ಮಂಗಳೂರು ಎಂಬ ಪುಸ್ತಕವನ್ನು ಹೊರತರಲಾಗಿದೆ. ನಿಟ್ಟೆ ವಿಶ್ವವಿದ್ಯಾಲಯದ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತ ಹೆಗ್ಡೆ ಇವರ ನೇತೃತ್ವದಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ನಗರದಲ್ಲಿ ಮರಗಳ ಲೆಕ್ಕ ಹಾಕಲಾಗಿತ್ತು. ಈ ಲೆಕ್ಕಚಾರದಲ್ಲಿ ಕಂಡು ಬಂದ ಕಟು ಸತ್ಯವೇನೆಂದರೆ, ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಒಟ್ಟು 60 ವಾರ್ಡ್ ನ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೇಕಡ 6.24 ರಷ್ಟು ಮಾತ್ರ ಮರಗಳಿವೆ, ಅದರಲ್ಲಿ 19,171 ವಿವಿಧ ಜಾತಿಯ ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು ಶೇಕಡ 41.09 ರಷ್ಟು ಮರಗಳು ಇದೆ. ಇದು ಮುಂದಿನ ದಿನಗಳಲ್ಲಿ ಕಟ್ಟಡ ಅಥವಾ ಇತರೆ ಕಾಮಗಾರಿಗೆ ಅದು ಕೂಡ ಬಲಿಯಾಗುವ ಭೀತಿ ಎದುರಾಗಿದೆ.. ಅರಣ್ಯಗಳೆಲ್ಲಾ ನಾಶವಾಗಿ ಈಗ ಉಳಿದಿರುವ ಅರಣ್ಯದಲ್ಲಿ 41 ಶೇ. ಖಾಸಗಿ ಜಮೀನಿನಲ್ಲಿದೆ. ಆ ಮರಗಳು ಒಂದೆರಡು ವರ್ಷಗಳಲ್ಲಿ ನಾಶವಾಗಿ ಹೋಗಬಹುದು. ಹಾಗೇನಾದರೂ ಆದರೆ, ಇಲ್ಲಿ ಅರಣ್ಯವುಳಿಯುವುದು ಕೇವಲ 6.24%.. ಅಂತಹ ಪರಿಸ್ಥಿತಿ ಬಂದರೆ, ನಮ್ಮ ದುಸ್ಥಿತಿ ಏನಾಗಬಹುದು ?.


    ಬೃಹತ್ ಕಟ್ಟಡಗಳು, ರಸ್ತೆಗಳು ಹೀಗೆ ಅಭಿವೃದ್ಧಿಯ ನೆಪದಲ್ಲಿ ಮಂಗಳೂರಿನಲ್ಲಿ ಅರಣ್ಯಗಳ ಮಾರಣಹೋಮವೇ ನಡೆದಿದೆ. ಕಟ್ಟಡ ಕಾಮಗಾರಿಗಳ ಆರ್ಭಟದಿಂದ ಅರಣ್ಯವು ನೆಲಕಚ್ಚಿ ಹೋದರೂ ನಿಯಮ ಪಾಲಿಸುವಲ್ಲಿ ಪಾಲಿಕೆ ಎಡವಿದರೆ, ಅರಣ್ಯ ಇಲಾಖೆ ಮೌನಕ್ಕೆ ಜಾರಿದೆ. ಈಗಾಗಲೇ ಮಾಡಿರುವ ಸರ್ವೆ ಪ್ರಕಾರ ಮನಪ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಇತರೆ ವಿಚಾರದಿಂದ ಮರಗಳ ನಾಶವಾಗಿ ಹವಾಮಾನ ವೈಪರೀತ್ಯಗಳಾಗುತ್ತಿದೆ. ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು ಈ ಭಾಗದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶೇಕಡ ಮೂರರಷ್ಟು ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಇಲ್ಲದೆ ಕಾರಣ ಇಲ್ಲಿ ಸರ್ವೆ ಪ್ರಕಾರ ತಾಪಮಾನ ಕಡಿಮೆಯಾಗಿದೆ. ಮಂಗಳೂರಿನಲ್ಲಿ ಬಿಸಿಲ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನೆಂಬ ಸತ್ಯವನ್ನು ನಾವು ಅರಿತುಕೊಳ್ಳುವಲ್ಲಿ ಸೋತಿದ್ದೇವೆ. ಇಂತಹ ಪರಿಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಮಂಗಳೂರು ಮರುಭೂಮಿಯಂತಾಗುವುದರಲ್ಲಿ ಸಂಶಯವೇ ಇಲ್ಲ. ಹತ್ತಿಪ್ಪತ್ತು ವರ್ಷಗಳು ಕಳೆದರೆ ಮಂಗಳೂರು ಮಾನವ ವಾಸ ಯೋಗ್ಯವಲ್ಲದ ಪ್ರದೇಶವಾಗಿ ಘೋಷಿಸಲ್ಪಟ್ಟರೂ ಅಚ್ಚರಿಯಿಲ್ಲ..
    ಅರಣ್ಯದ ರಕ್ಷಣೆಗಾಗಿ ಇರುವ ಅರಣ್ಯ ಇಲಾಖೆ ಇದ್ದೂ ಇಲ್ಲದಂತಾದರೆ, ಸರಕಾರ ತನ್ನ ಲಾಭಗಳಿಸುವಿಕೆಯ, ಮತ ಎಣಿಕೆಯ ದೃಷ್ಟಿಕೋನದಲ್ಲಿದೆಯೇ ವಿನ:ಪ್ರಕೃತಿಯನ್ನು ರಕ್ಷಿಸುವ ಬಗ್ಗೆ ಯಾವ ಗಂಭೀರ ಚಿಂತನೆಯನ್ನೂ ನಡೆಸುತ್ತಿಲ್ಲ. ಪರಿಸರ ದಿನ ಬಂದಾಗ ಪರಿಸರದ ಬಗ್ಗೆ ಮಾತನಾಡುವ ಪರಿಸರವಾದಿಗಳ ಧ್ವನಿ ಕೂಡ ಕ್ಷೀಣಿಸುತ್ತಿದೆ. ಮರಗಳ ನಾಶದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿ, ಸೂಕ್ತ ಕ್ರಮವನ್ನು ಶೀಘ್ರವೇ ಕೈಗೊಳ್ಳದಿದ್ದಲ್ಲಿ ಮುಂದಿನ 25 ವರ್ಷಗಳಲ್ಲಿ ಸಕಲ ಜೀವ ಸಂಕುಲ ನಾಶವಾಗಿ ಮಂಗಳೂರು ಇತಿಹಾಸದ ಪುಟ ಸೇರಿದ್ರೆ ಬಹುಷ ಅಚ್ಚರಿಯಾಗಲಾರದು.

    Share Information
    Advertisement
    Click to comment

    Leave a Reply

    Your email address will not be published. Required fields are marked *