LATEST NEWS
ಯುವತಿ ಡ್ರಗ್ ಅಡಿಕ್ಟ್ ಎಂಬ ವೈರಲ್ ವಿಡಿಯೋ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ
ಮಂಗಳೂರು ಸೆಪ್ಟೆಂಬರ್ 09: ಯುವತಿಯೊಬ್ಬಳು ಡ್ರಗ್ ಅಡಿಕ್ಟ್ ಎಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಯುವತಿ ಯಾವುದೇ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಫಲಿತಾಂಶ ಬಂದಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪೊಲೀಸ್ ಇಲಾಖೆ ವಿಡಿಯೋದಲ್ಲಿರುವ ಘಟನೆ ಸ್ಪಪ್ಟೆಂಬರ 1 ರಂದು ನಡೆದಿದ್ದು, ಯುವತಿಯೊಬ್ಬಳು ಪಂಪವೆಲ್ ನಲ್ಲಿರುವ ಗಣೇಶ ಮೆಡಿಕಲ್ ನಲ್ಲಿ ಆಕ್ರಮಣಕಾರಿಯಾಗಿ ವರ್ತನೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ತೆರಳಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಆಕೆ ಮಾದಕ ದ್ರವ್ಯ ಸೇವನೆ ಮಾಡಿರಬಹುದೆಂದು ಆಕೆಯನ್ನು ವೈದ್ಯಕೀಯ ತಪಾಸಣೆ ನಡೆಸಲು ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ . ಈ ಹಿನ್ನಲೆ ಅಬಕಾರಿ ಇಲಾಖಾ ಅಧಿಕಾರಿಗಳು ಆಕೆಯನ್ನು ಮಂಗಳೂರು ಪೂರ್ವ (ಕದ್ರಿ) ಪೊಲಿಸ್ ಠಾಣೆಗೆ ಕರೆ ತಂದಿರುತ್ತಾರೆ.
ಈ ವೇಳೆ ಯುವತಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಕೂಡಾ ನಿಯಂತ್ರಣ ಮೀರಿ ಆಕ್ರಮಣಕಾರಿಯಾಗಿ ವರ್ತಿಸಿದ್ದು ಆಕೆಯನ್ನು ಅಗತ್ಯ ಮಹಿಳಾ ಸಿಬ್ಬಂದಿ ಬಲದೊಂದಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಬಗ್ಗೆ ಅಬಕಾರಿ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ತಪಾಸಣೆಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಪೂರಕ ಫಲಿತಾಂಶ ಬಂದಿರುವುದಿಲ್ಲ. ನಂತರ ಆಕೆಯನ್ನು ಆಕೆಯ ಪೋಷಕರ ವಶಕ್ಕೆ ವಹಿಸಿದ್ದು, ಸದ್ಯ ಉದ್ರೇಕಕಾರಿ ವರ್ತನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ರಿ ಯುವತಿ ಆಕ್ರಮಣಕಾರಿಯಾಗಿ ಮತ್ತು ಉದ್ರೇಕಕಾರಿಯಾಗಿ ಅಬಕಾರಿ ಇಲಾಖಾ ಅಧಿಕಾರಿಗಳೊಂದಿಗೆ ವರ್ತಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ.