DAKSHINA KANNADA
ದ.ಕ ಜಿಲ್ಲೆಯಲ್ಲಿ ಏರುತ್ತಲಿದೆ ಸಾಂಕ್ರಾಮಿಕ ರೋಗಿಗಳ ಸಂಖ್ಯೆ, ರೋಗ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ..!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ದಿನದಿಂದ ಏರುತ್ತಲಿದ್ದು, ರೋಗ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಸಂಪೂರ್ಣ ವಿಫಲವಾಗಿದೆ ಎಂದು DYFI ಆರೋಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಬಾರಿ ಮಳೆಗಾಲ ಆರಂಭವಾದರೆ ಸಾಂಕ್ರಾಮಿಕ ರೋಗಗಳು ಜನತೆಯನ್ನು ಭಾದಿಸುವುದು ಸರ್ವೇಸಾಮಾನ್ಯ. ಈ ಬಾರಿ ಮಳೆ ಬೀಳುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿಯು ಹೆಚ್ಚಾಗ ತೊಡಗಿದೆ. ಅನೇಕ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿತಾಣಗಳು ಸೃಷ್ಟಿಯಾಗಿ ಇದರಿಂದ ಜನತೆಯು ರೋಗಬಾಧಿತರಾಗಿ ಪರಿತಪಿಸುವಂತಾಗಿದೆ. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತವು ಮಳೆಗಾಲ ಎದುರಿಸಲು ಮತ್ತು ಆರೋಗ್ಯ ಸುರಕ್ಷಾ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿಯಷ್ಟೇ ನಡೆಸಿದೆ ಹೊರತು ಡೆಂಗ್ಯೂಗಳಂತಹ ಸಾಂಕ್ರಮಿಕ ರೋಗಗಳ ನಿಯಂತ್ರಣಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಂಡಲೇ ಇಲ್ಲ. ಇಲ್ಲಿನ ಸ್ಥಳೀಯ ಆಡಳಿತದ ಪರವಾನಿಗೆ ಪಡೆದು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡ ಕಾಮಗಾರಿಗಳಲ್ಲಿ ನೈರ್ಮಲ್ಯಗಳ ಕುರಿತಾಗಿ ಯಾವುದೇ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿಲ್ಲ. ಸ್ಮಾರ್ಟ್ ಸಿಟಿ ಸಹಿತ ಪಾಲಿಕೆ ಕೈಗೆತ್ತಿಕೊಂಡಿರುವ ಅರ್ಧಂಬರ್ಧ ಅಭಿವೃದ್ದಿ ಕಾಮಗಾರಿಗಳಿಂದ ರಸ್ತೆ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳು ನಿರ್ಮಿಸುವಲ್ಲಿ ಪಾಲಿಕೆ ಆಡಳಿತವೇ ನೇರ ಹೊಣೆಯಾಗಿದೆ. ಈ ರೀತಿ ನೀರು ನಿಲ್ಲುವ ರಸ್ತೆ, ತಗ್ಗು ಪ್ರದೇಶಗಳಲ್ಲಿ, ಚರಂಡಿ, ತೋಡುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವಲ್ಲಿ ನಗರ ಪಾಲಿಕೆ ಬಿಜೆಪಿ ಆಡಳಿತ ಸಂಪೂರ್ಣ ವೈಫಲ್ಯಗೊಂಡಿದೆ.
ಇನ್ನೊಂದೆಡೆ ಡೆಂಗ್ಯು ಪರೀಕ್ಷೆ ನಡೆಸಲು ಖಾಸಗೀ ಆಸ್ಪತ್ರೆಗಳಿಗೆ ಪರೀಕ್ಷಾ ದರಗಳನ್ನು ಸರಕಾರ ನಿಗಧಿಗೊಳಿಸಿರುವುದು ಬಿಟ್ಟರೆ ಡೆಂಗ್ಯು ಪತ್ತೆಯಾದ ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸಾ ದರ ಮತ್ತು ವೈದ್ಯರು ವಿಧಿಸುವ ಶುಲ್ಕದ ಬಗ್ಗೆ ಪ್ರಸ್ತಾಪಗಳಿಲ್ಲ. ಪ್ರತೀ ಸಂದರ್ಭದಲ್ಲೂ ಖಾಸಗೀ ಆಸ್ಪತ್ರೆಗಳು ರೋಗದ ಹೆಸರಲಿ ಲೂಟಿ ನಡೆಸಲು ಇಳಿಯುತ್ತಿವೆ. ಈಗಾಗಲೇ ಸರಕಾರ ಪರೀಕ್ಷಾ ದರ ಎಲಿಸಾ ಎನ್ ಎಸ್ 1 -300, ಎಲಿಸಾ ಐಜಿಎಂ-300 Rapid ಕಾರ್ಡ್-250 ಎಲ್ಲಾ ಸೇರಿದರೆ 600 ಅಂತ ದರ ವಿಧಿಸಿದ್ದರೂ ಕೆಲವೊಂದು ಖಾಸಗೀ ಆಸ್ಪತ್ರೆಗಳು ಒಂದೊಂದು ಪರೀಕ್ಷೆಗಳಿಗೆ 500, 600 ಪಡೆಯುತ್ತಿವೆ ಮತ್ತು ದಾಖಲಾಗ ರೋಗಿಗಳಿಂದ ವಿಪರೀತ ಪ್ರಮಾಣದ ಚಿಕಿತ್ಸಾ ದರಗಳನ್ನು ವಿಧಿಸುತ್ತಿವೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಈ ರೀತಿ ಯಾವುದೇ ಮುಂಜಾಗೃತೆಗಳನ್ನು ವಹಿಸದೆ ಜನತೆಯ ಆರೋಗ್ಯವನ್ನು ನಿರ್ಲಕ್ಷಿಸಿರುವ ಜಿಲ್ಲಾಡಳಿತದ ನಡೆಯನ್ನು ಡಿವೈಎಫ್ಐ ದಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಜಿಲ್ಲೆಯ ಸಂಸದರು, ಶಾಸಕರುಗಳು ತಮ್ಮ ವ್ಯಾಪಾರಿ ಹಿತದೃಷ್ಟಿ ಮತ್ತು ಕೋಮು ಅಜೆಂಡಾಗಳನ್ನು ಬದಿಗಿರಿಸಿ ಜನತೆಯ ಆರೋಗ್ಯ ಕಾಳಜಿಯತ್ತ ಗಮನಹರಿಸಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಸೂಕ್ತವಾದ ಕ್ರಮಕೈಗೊಳ್ಳುವುದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗಳು ಮತ್ತು ಪೀಡಿತ ರೋಗಿಗಳ ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾಗಬೇಕು. ಹಾಗೂ ರೋಗದ ಹೆಸರಲ್ಲಿ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ದ ಸರಕಾರ ಸೂಕ್ತ ಕ್ರಮಕೈಗೊಳಬೇಕೆಂದು ಒತ್ತಾಯಿಸಿ ಡಿವೈಎಫ್ಐ ದಕ ಜಿಲ್ಲಾ ಅಧ್ಯಕ್ಷರಾದ ಬಿಕೆ ಇಮ್ತಿಯಾಜ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪ್ರತಿಕ್ರಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.