ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯ
ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯ
ಉಡುಪಿ,ಡಿಸೆಂಬರ್ 15:ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯ ಅಳವಡಿಸಲಾಗಿದೆ.ಈ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯವು ಕರಾವಳಿ ಕರ್ನಾಟಕದಲ್ಲಿ ಲಭ್ಯವಾಗುತ್ತಿರುವುದು ಇದೇ ಮೊದಲು.
ಬೆಂಗಳೂರಿನ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯ ರೇಡಿಯೋಥೆರಪಿ ಮತ್ತು ಓಂಕಾಲಜಿ ವಿಭಾಗವು ಸ್ಟೀರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯವನ್ನು ಆರಂಭಿಸಿದೆ.
ಇದು ಅತ್ಯಧಿಕ ಡೋಸೇಜ್‌ನ ಎಕ್ಸ್‌ರೇಗಳನ್ನು ಕ್ಯಾನ್ಸರ್ ಗಡ್ಡೆಯ ಮೇಲೆ ಅತ್ಯಂತ ನಿಖರವಾಗಿ ಕೇಂದ್ರೀಕರಿಸಿ ಹಾಯಿಸಲು ಸಾಧ್ಯವಾಗುವ ವಿಕಿರಣ ಚಿಕಿತ್ಸಾ ತಂತ್ರಜ್ಞಾನ.
ಈ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣ ತೊಡೆದುಹಾಕಬಹುದು.
ತೊಂದರೆಗೀಡಾದ ದೇಹಭಾಗವನ್ನು ತೆಗೆದು ಹಾಕುವಲ್ಲಿ ಶಸ್ತ್ರಚಿಕಿತ್ಸೆಯು ಒದಗಿಸುವಷ್ಟೇ ನಿಖರ ಪರಿಣಾಮವನ್ನು ಈ ವಿಧಾನದಿಂದ ಪಡೆಯಬಹುದು.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದು ಅತ್ಯಾಧುನಿಕ ತಂತ್ರಜ್ಞಾನ. ಕೆಲವು ನಿರ್ದಿಷ್ಟ ಬಗೆಯ ಮೆದುಳು ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಅಲ್ಲದ ಇನ್ನಿತರ ಅಸಹಜ ಬೆಳವಣಿಗೆಗಳ ಚಿಕಿತ್ಸೆಯಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಎಂಬುದಾಗಿ ಸಂಶೋಧನೆಗಳಲ್ಲಿ ಕಂಡುಬಂದಿದೆ.
ಅತ್ಯಾಧುನಿಕ ಯಂತ್ರೋಪಕರಣದ ಮೂಲಕ ಮೆದುಳಿನ ಗಡ್ಡೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ವಿಕಿರಣ ಹಾಯಿಸಲಾಗುವುದು. ಇದರಿಂದ ಗಡ್ಡೆ ಅಕ್ಕಪಕ್ಕದ ನರ ಮತ್ತು ಜೀವಕೋಶಗಳು ಹಾನಿಗೀಡಾಗುವುದು ತಪ್ಪುತ್ತದೆ.
ಹೊಸ ಶಸ್ತ್ರಚಿಕಿತ್ಸೆಯು ನರ- ಕ್ಯಾನ್ಸರ್ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನೈಜ ಬದಲಾವಣೆಗೆ ನಾಂದಿ ಹಾಡಲಿದೆ.
ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಸಿಗುವ ಫಲಿತಾಂಶವನ್ನೇ ಹೊಸ ವಿಧಾನದಲ್ಲಿ ಪಡೆಯಬಹುದು. ಆದರೆ ತೆರೆದ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ.
ಜತೆಗೆ 7ರಿಂದ 10 ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಸುರಕ್ಷತೆ, ವೇಗ ಮತ್ತು ನಿಖರತೆ- ಇವು ಹೊಸ ಶಸ್ತ್ರಚಿಕಿತ್ಸೆಯ ಮುಖ್ಯ ಪ್ರಯೋಜನಗಳು.
ಸಾಮಾನ್ಯ ರೀತಿಯ ನರರೋಗ ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯಕೀಯವಾಗಿ ಶಕ್ತರಾಗದೇ ಇರುವವರು ಸಹ ಈ ಹೊಸ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಮೊದಲು ಈ ಚಿಕಿತ್ಸೆಯನ್ನು ಮೆದುಳಿಗಷ್ಟೇ ಉಪಯೋಗಿಸಲಾಗುತ್ತಿತ್ತು. ತಾಂತ್ರಿಕ ಪ್ರಗತಿಯಿಂದಾಗಿ ಈಗ ಈ ತಂತ್ರಜ್ಞಾನವನ್ನು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್, ಅಂದರೆ ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಮತ್ತು ಲಿವರ್ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಬಳಸಬಹುದಾಗಿದೆ.