DAKSHINA KANNADA
ಪುರಾಣ ಪ್ರಸಿದ್ದ ಕದ್ರಿ ಜೋಗಿ ಮಠ ವಿವಾದ ಮತ್ತೆ ಬಹಿರಂಗ – ಜೋಗಿ ಮಠಾಧೀಶರ ವಿರುದ್ಧ ಹರಿನಾಥ ಜೋಗಿ ವಾಗ್ದಾಳಿ..!

ಮಂಗಳೂರು, ಎಪ್ರಿಲ್ 08 : ಪುರಾಣ ಪ್ರಸಿದ್ದ ಮಂಗಳೂರನ ಕದ್ರಿ ಜೋಗಿ ಮಠ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು ಮಠದ ಸ್ವಾಮೀಜಿ ವಿರುದ್ದ ಜೋಗಿ ಸಮುದಾಯದ ಮುಖಂಡ ಹರಿನಾಥ ಜೋಗಿ ವಾಗ್ದಾಳಿ ನಡಿಸಿದ್ದಾರೆ.
ನಗರದ ಜೋಗಿ ಸಮುದಾಯದ ಜನತೆ ಸೇರಿದಂತೆ ಸಮಸ್ತ ಸಮುದಾಯದ ಬಾಂಧವರೆಲ್ಲರೂ ಸೇರಿ ಕಾಲಭೈರವ ದೇವರ ಪುನರ್ ಪ್ರತಿಷ್ಠೆ ಮಾಡುವ ನಿರ್ಧಾರ ಕೈಗೊಂಡು 2023ರ ಫೆಬ್ರವರಿ 6ರಂದು ಕದ್ರಿ ಮಠಾಧೀಶರಾದ ಶ್ರೀ ನಿರ್ಮಲ ನಾಥಜೀಯವರು ಕಾಲಭೈರವ ದೇವರ ವಿಗ್ರಹದ ಪುನರ್ ಪ್ರತಿಷ್ಠೆಯನ್ನು ಮಾಡಿಸಿದ್ದಾರೆ.

ರಾಜಸ್ಥಾನದಿಂದ ಮಾರ್ವಾಡಿಗಳು ತಂದಿರುವ ಕಾಲ ಭೈರವ ದೇವರ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಮಠದಲ್ಲಿರುವ ಪುರಾತನ ವಿಗ್ರಹಗಳಾದ ಜ್ವಾಲಾ ಮಹಮ್ಮಾಯಿ, ಮಹಾಕಾಳಿ ಹಾಗೂ ಇತರ ಮೂರ್ತಿಗಳನ್ನು ಬಿಸಾಡಿ ಮರು ಪ್ರತಿಷ್ಠಾಪಿಸದೇ ಘೋರ ತಪ್ಪನ್ನು ಮಾಡಿದ್ದಾರೆ.
ಪುನರ್ ಪ್ರತಿಷ್ಠೆ ಆಗಬೇಕಾಗಿದ್ದ ಕಾಲಭೈರವ ದೇವರ ವಿಗ್ರಹ ಸುಮಾರು 2000 ವರ್ಷಗಳಷ್ಟು ಹಿಂದಿನದ್ದಾಗಿದೆ ಎಂದು ಜೋಗಿ ಸಮುದಾಯದ ಹರಿನಾಥ ಜೋಗಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೊಸ ಗರ್ಭಗುಡಿ ಮತ್ತು ಸುತ್ತುಪೌಳಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಹಿಂದೆ 2014ನೇ ಇಸವಿಯಂದು ಜೋಗಿಮಠದ ಸಮಿತಿಯವರು ಹೊಸದಾಗಿ ನಿರ್ಮಿಸಿದ ಸುತ್ತುಪೌಳಿ ಹಾಗೂ ಆವರಣ ಗೋಡೆಯನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ.
ಈ ಹಿಂದೆ ಮಾಡಿದ ಕಾಮಗಾರಿಗಳನ್ನು ನೆಲಸಮ ಮಾಡಲಾಗಿದೆ. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಬೆಲೆ ಕೊಡದೇ ಅವಾಚ್ಯವಾಗಿ ನಿಂದಿಸಿದ್ದಾರೆ. ಕಾಲಭೈರವ ಮೂರ್ತಿಯನ್ನು 70 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಈಗಿನ ಸ್ವಾಮೀಜಿ ಹುನ್ನಾರ ನಡೆಸಿದ್ದರು. ಆದರೆ ನಾವು ಅದನ್ನು ವಿಫಲಗೊಳಿಸಿದೆವು. ಮಠದ ವಿಚಾರದಲ್ಲಿ ನಡೆಯುತ್ತಿರುವ ಅಕ್ರಮ ಕೆಲಸಗಳಿಗೆ ಕೋರ್ಟಿನಿಂದ ತಡೆಯಾಜ್ಞೆ ತರಲು ಯತ್ನಿಸಿದ ಸಂದರ್ಭ ಅದು ಈಡೇರಲಿಲ್ಲ ಎಂದರು.
ಕದ್ರಿ ಜೋಗಿ ಮಠದ ಬಗ್ಗೆ ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ದಾಖಲೆಗಳನ್ನು ನೀಡಿದ್ದೇವೆ. ಎಂಟು ವರ್ಷಗಳಾದರೂ ನ್ಯಾಯಾಲಯ ಏನಾದರೊಂದು ನ್ಯಾಯಬದ್ಧ ತೀರ್ಪು ನೀಡಿದ್ದರೆ ನಮಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ ಮನವರಿಕೆ ಮಾಡಿದ್ದೇವೆ. ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ.
15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಇದು ಜೋಗಿ ಮಠ ಎಂದು ಹೇಳಿದ್ದಾರೆ. ಈಗ ಕಾಲಭೈರವ ದೇವರ ವಿಗ್ರಹ ಪುನಃಪ್ರತಿಷ್ಠೆ ಮಾಡಬೇಕೆಂದು ನಾವು ಜಿಲ್ಲಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡಿದ್ದೇವೆ ಎಂದರು. ಇಲ್ಲಿರುವ ವಿವಾದದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ವಿಶೇಷ ಕಾಳಜಿ ವಹಿಸಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಕದ್ರಿ ಜೋಗಿ ಮಠದ ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಹರಿನಾಥ್ ಹೇಳಿದ್ದಾರೆ.