KARNATAKA
ಚಾರಣಿಗರಿಗೆ ಪ್ಲಾಸ್ಟಿಕ್ ಬ್ಯಾಗ್, ನೀರಿನ ಬಾಟಲಿ, ತಿಂಡಿ ಪೊಟ್ಟಣ, ಮದ್ಯ ಬಾಟಲಿ, ಸಿಗರೇಟ್,ಬೆಂಕಿಪೊಟ್ಣ ನಿಷೇಧಿಸಿದ ಅರಣ್ಯ ಇಲಾಖೆ..!
ಬೆಂಗಳೂರು: ಇನ್ಮುಂದೆ ಚಾರಣಿಗರು ಪ್ಲಾಸ್ಟಿಕ್ ಬ್ಯಾಗ್, ನೀರಿನ ಬಾಟಲಿ, ತಿಂಡಿ ಪೊಟ್ಟಣ, ಮದ್ಯ ಬಾಟಲಿ, ಸಿಗರೇಟ್,ಬೆಂಕಿಪೊಟ್ಣ ತಮ್ಮ ಜೊತೆ ಕೊಂಡು ಹೋಗುವಂತಿಲ್ಲ ಎಂದು ಅರಣ್ಯ ಇಲಾಖೆ ಆದೇಶಿಸಿದೆ. ತಪಾಸಣೆಯಲ್ಲಿ ಇವುಗಳು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವಸಚಿವ ಈಶ್ವರ ಖಂಡ್ರೆ ಅವರು ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ರವಾನೆ ಮಾಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಆನ್‍ಲೈನ್‍ನಲ್ಲಿ ಚಾರಣ ಪಥಗಳ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸುವ https://aranyavihaara.karnataka.gov.in ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಡಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತು ಚಾರಣಕ್ಕೆ ಬರುವವರಿಗೆ ಮೊದಲ ಹಂತದಲ್ಲಿ ನಿಷೇಧಿತ ವಸ್ತುವನ್ನು ಸ್ವಯಂ ಕಸದ ಬುಟ್ಟಿಗೆ ಹಾಕಲು ತಿಳಿಸಲಾಗುವುದು. 2ನೇ ಹಂತದಲ್ಲಿ ತಪಾಸಣೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ, ಇದರಿಂದ ಪರಿಸರಕ್ಕೆ ಹಾನಿ ಆಗಬಾರದು ಎಂಬುದು ಸರಕಾರದ ಕಾಳಜಿಯಾಗಿದ್ದು, ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಜನವರಿ 26, 27ರಂದು ಕುಮಾರಪರ್ವತಕ್ಕೆ 5-6 ಸಾವಿರ ಪ್ರವಾಸಿಗರು ಒಂದೇ ದಿನ ಆಗಮಿಸಿದ ಹಿನ್ನೆಲೆಯಲ್ಲಿ ಗೊಂದಲ ಆಗಿತ್ತು. ಇಂತಹ ಗೊಂದಲ ನಿವಾರಿಸಲು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಈ ವೆಬ್‍ಸೈಟ್‍ನಲ್ಲಿ ರಾಜ್ಯದ ಎಲ್ಲ ಚಾರಣ ಪಥಗಳ ಟಿಕೆಟ್ ಅನ್ನೂ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್ ಸಿಗದವರು ಬೇರೆ ಚಾರಣಪಥವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರಸಕ್ತ 5 ತಾಣಗಳಿಗೆ ಅಂದರೆ ಕುಮಾರ ಪರ್ವತದಿಂದ ಸುಬ್ರಹ್ಮಣ್ಯ, ಬೀದಹಳ್ಳಿಯಿಂದ-ಕುಮಾರ ಪರ್ವತ, ಬೀದಹಳ್ಳಿ-ಕುಮಾರ ಪರ್ವತ-ಸುಬ್ರಹ್ಮಣ್ಯ, ಚಾಮರಾಜನಗರ-ನಾಗಮಲೈ, ತಲಕಾವೇರಿಯಿಂದ-ನಿಶಾನೆಮೊಟ್ಟೆ ಚಾರಣ ತಾಣಗಳಿಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಅಕ್ಟೋಬರ್ ಅಂತ್ಯದೊಳಗೆ 40 ಚಾರಣ ಪಥಗಳನ್ನು ಈ ವೆಬ್‍ಸೈಟ್‍ನಲ್ಲಿ ಸೇರಿಸಲಾಗುವುದು. ಜೊತೆಗೆ ವನ್ಯಜೀವಿ ಸಫಾರಿ ಮತ್ತು ಬೋಟ್ ಸಫಾರಿಗೂ ಇದರಲ್ಲೇ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಒಂದು ಫೋನ್ ನಂಬರ್ ನಲ್ಲಿ 10 ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು, 7 ದಿನ ಮೊದಲು ರದ್ದು ಮಾಡಿದರೆ ಪೂರ್ಣ ಹಣ ಮರಳಿಸಲು ಅವಕಾಶ ಇರುತ್ತದೆ. ನಂತರದ ರದ್ದತಿಗೆ ಪೂರ್ಣ ಹಣ ಸಿಗುವುದಿಲ್ಲ, ಭಾಗಶಃ ಕಡಿತ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದರು.
ವೆಬ್‍ಸೈಟ್‍ನಲ್ಲಿ ರಾಜ್ಯದ ವಿವಿಧ ಚಾರಣ ಪಥಗಳ ಚಿತ್ರ, ಅವುಗಳ ವಿಶೇಷ ಕುರಿತಂತೆ ಸಂಕ್ಷಿಪ್ತ ಮಾಹಿತಿ ಒದಗಿಸಲಾಗಿದೆ. ಇದರಿಂದ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಮಾಹಿತಿಯೂ ಲಭಿಸುತ್ತದೆ. ಟಿಕೆಟ್ ಅನ್ನು ಮುಂಗಡ ಕಾಯ್ದಿರಿಸಲು ಅವಕಾಶವೂ ಆಗುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಮುಂಗಾರು ಮಳೆ ಸುರಿಯುವ ಸಮಯದಲ್ಲಿ ಚಾರಣ ಮಾಡುವುದು ಸೂಕ್ತವಲ್ಲ. ಅನುಭವ ಇಲ್ಲದ ಚಾರಣಿಗರು ಜಾರಿ ಬೀಳುವ ಅಪಾಯ ಇರುತ್ತದೆ. ಜೊತೆಗೆ ಕೀಟ, ಜೀವ ಜಂತುಗಳಿಗೂ ತೊಂದರೆ ಆಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಚಾರಣ ನಿರ್ಬಂಧಿಸುವುದು ಒಂದು ಕಾರಣವಾಗಿತ್ತು ಎಂದು ಈಶ್ವರ್ ಖಂಡ್ರೆ ಹೇಳಿದರು.
ಚಾರಣ ಪಥಗಳ ಟಿಕೆಟ್ ಅನ್ನು ಚಾರಣ ಏರ್ಪಡಿಸುವ ಕೆಲವು ಖಾಸಗಿ ಸಂಸ್ಥೆಗಳು ಸಗಟು ಖರೀದಿ ಮಾಡುತ್ತವೆ. ಹೀಗಾಗಿ ನೈಜ ಚಾರಣಿಗರಿಗೆ ಟಿಕೆಟ್ ಲಭಿಸದಂತಾಗಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಕ್ರಮಗಳ ಕಡಿವಾಣಕ್ಕೆ ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಸೇರಿದಂತೆ ಸರಕಾರದ ಭಾವಚಿತ್ರ ಸಹಿತ ಗುರುತಿನ ಚೀಟಿ ಅಪ್‍ಲೋಡ್ ಮಾಡಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಅರಣ್ಯ ಇಲಾಖೆಯ ಭಾಗವಾಗಿರುವ ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದ ಚಿಕ್ಕಬಳ್ಳಾಪುರದ ಸ್ಕಂದಗಿರಿ ಚಾರಣಪಥದಲ್ಲಿ ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಬ್ಲಾಕ್ ಮಾಡಲು ಖಾಸಗಿ ಪ್ರವಾಸೋದ್ಯಮ ಸಂಸ್ಥೆಗಳೊಂದಿಗೆ ಕೆಲವು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ, ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.