LATEST NEWS
ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್ ಧ್ವಜ, ಕ್ಯಾಚ್ ಹಿಡಿದ ಸೋನಿಯಾಗಾಂಧಿ!
ನವದೆಹಲಿ, ಡಿಸೆಂಬರ್ 28: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾರಿ ಎಡವಟ್ಟು ನಡೆದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಬಾವುಟವನ್ನು ಏರಿಸುತ್ತಿದ್ದಂತೆಯೇ ಅದು ಹರಿದು ಹೋಗಿ ಕೆಳಕ್ಕೆ ಬೀಳುವ ಹಂತದಲ್ಲಿತ್ತು. ಕೂಡಲೇ ಸೋನಿಯಾ ಗಾಂಧಿ ಅದನ್ನು ಹಿಡಿದುಕೊಂಡರು.
ಪ್ರತಿವರ್ಷ ಡಿ.28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಅದರ 137ನೇ ಸಂಸ್ಥಾಪನಾ ದಿನಾಚರಣೆ ಇದ್ದು, ಇದರ ಅಂಗವಾಗಿ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ಮುಂದಾದರು. ಆಗ ಕಾರ್ಯಕರ್ತರೊಬ್ಬರು ಧ್ವಜಕ್ಕೆ ಕಟ್ಟಿದ್ದ ದಾರವನ್ನು ಜಗ್ಗಿದ ಸಂದರ್ಭದಲ್ಲಿ ಅದು ಬಿದ್ದು ಹೋಗಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದೆ.
#WATCH | Congress flag falls off while being hoisted by party's interim president Sonia Gandhi on the party's 137th Foundation Day#Delhi pic.twitter.com/A03JkKS5aC
— ANI (@ANI) December 28, 2021
ಆ ಕ್ಷಣದಲ್ಲಿ ಮಡಚಿಕೊಂಡಿದ್ದ ಧ್ವಜವನ್ನು ಸೋನಿಯಾ ಗಾಂಧಿ ಅವರು ಬಿಡಿಸಿ ಸಾಂಕೇತಿಕವಾಗಿ ಪ್ರದರ್ಶನ ಮಾಡಿದರು. ಬಳಿಕ ಪಕ್ಷದ ಕಾರ್ಯಕರ್ತರು ಅದನ್ನು ಸರಿಯಾಗಿ ಕಟ್ಟಿ, ಮತ್ತೆ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಜಿಂದಾಬಾದ್ ಎಂಬ ಘೋಷಣೆಯನ್ನೂ ಕೂಗಲಾಯಿತು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್ ಇತರರು ಇದ್ದರು. ನಂತರ ಸೇವಾದಳದ ಕಾರ್ಯಕರ್ತರು ರಾಷ್ಟ್ರ ಗೀತೆ ಗಾಯನ ಮಾಡಿ ಕಾರ್ಯಕ್ರಮ ಮುಂದುವರೆಸಿದ್ದಾರೆ.