LATEST NEWS
ಬಾನೆಟ್ ಮೇಲೆ ಕುಳಿತ ಪೊಲೀಸ್ ಸಿಬ್ಬಂದಿಯನ್ನೇ 1 ಕಿ.ಮೀ ಎಳೆದೊಯ್ದ ಚಾಲಕ
ಮುಂಬೈ, ಅಕ್ಟೋಬರ್ 01: ಸಂಚಾರಿ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ದಂಡ ಪಾವತಿಸುವಂತೆ ಕಾರಿಗೆ ಅಡ್ಡ ಹಾಕಿ ಬಾನೆಟ್ ಮೇಲೆ ಕುಳಿತ ಟ್ರಾಫಿಕ್ ಪೊಲೀಸ್‍ನನ್ನು 1ಕಿ.ಮೀ ವರೆಗೂ ಚಾಲಕ ಎಳೆದೊಯ್ದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಇದೀಗ ಚಾಲಕನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ಅಂಧೇರಿಯ ಅಜಾದ್‍ನಗರ ಮೆಟ್ರೋ ನಿಲ್ದಾಣದ ಕೆಳಗೆ ಕಾನ್ಸ್‌ಸ್ಟೇಬಲ್ ವಿಜಯ್‍ಸಿಂಗ್ ಗುರವ್(48) ಕರ್ತವ್ಯ ನಿರತರಾಗಿದ್ದರು. ಈ ವೇಳೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಕಾರನ್ನು ತಡೆದು ದಂಡ ಪಾವತಿಸುವಂತೆ ತಿಳಿಸಿದ್ದಾರೆ. ಆದರೆ ಐಡಿಯೊಂದನ್ನು ತೋರಿಸಿ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಾನೆ.
ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಕಾರಿನ ವೇಗವನ್ನು ಹೆಚ್ಚಿಸಿದಾಗ ಕಾನ್ಸ್‌ಸ್ಟೇಬಲ್ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಮಾಡದೇ ಚಾಲಕ ಸುಮಾರು ಒಂದು ಕಿ.ಲೋ ಮೀಟರ್‍ವರೆಗೂ ವಾಹನ ಚಲಾಯಿಸಿ ಬಾನೆಟ್ ಮೇಲಿದ್ದ ಕಾನ್ಸ್‌ಸ್ಟೇಬಲ್‍ರನ್ನು ಎಳೆದೊಯ್ದಿದ್ದಾನೆ. ನಂತರ ಗುರವ್ ಪೊಲೀಸ್ ಠಾಣೆಗೆ ಆಗಮಿಸಿ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 353(ಸಾರ್ವಜನಿಕ ಸೇವೆ ವೇಳೆ ಕರ್ತವ್ಯಕ್ಕೆ ಅಡ್ಡಿ) ಮತ್ತು 279 (ರಾಶ್ ಡ್ರೈವಿಂಗ್)ಗೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಘಟನೆಯ ವೀಡಿಯೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು, ಕಾರಿನ ಮೇಲೆ ಕುಳಿತ ಕಾನ್ಸ್‌ಸ್ಟೇಬಲ್ ಕುಳಿತಿದ್ದಾಗ ಚಾಲಕ ವಾಹನ ಚಾಲಾಯಿಸಿರುವುದನ್ನು ಕಾಣಬಹುದಾಗಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.