LATEST NEWS
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೆ ಹೆರಿಗೆ ಮಾಡಿಸಿದ ಭಾರತೀಯ ಸೇನೆ ಯ ವೈದ್ಯ

ಝಾನ್ಸಿ ಜುಲೈ 07: ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಭಾರತೀಯ ಸೇನೆಯ ವೈದ್ಯರೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಸೇನೆಯ ವೈದ್ಯ ಮೇಜರ್ ಡಾ.ರೋಹಿತ್ ಬಚ್‌ವಾಲಾ (31) ಅವರು ಮಹಿಳೆಗೆ ಹೆರಿಗೆ ಮಾಡಿಸಿ ಆಕೆಯ ಮತ್ತು ಆಕೆಯ ಮಗುವಿನ ಜೀವ ಉಳಿಸಿದ್ದಾರೆ.
ಮೂಲಗಳ ಪ್ರಕಾರ ಪನವೇಲ್–ಗೋರಖಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಶನಿವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮಹಿಳೆ ನೋವಿನಿಂದ ಕಿರುಚಾಡುವುದನ್ನು ಕಂಡ ಟಿಕೆಟ್ ಚೆಕ್ಕಿಂಗ್ ಸಿಬ್ಬಂದಿ ಮತ್ತು ಸೇನಾ ವೈದ್ಯಾಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾಗಿ ಮಹಿಳೆಗೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ಮೇಜರ್ ಡಾ.ರೋಹಿತ್ ಬಚ್‌ವಾಲಾ (31) ಅವರು ರೈಲಿಗಾಗಿ ಕಾಯುತ್ತಿದ್ದರು. ತುಂಬು ಗರ್ಭಿಣಿಯನ್ನು ಕಂಡು ಸಹಾಯ ಮಾಡಲು ಮುಂದಾದ ಅವರು ರೈಲ್ವೆ ಸಿಬ್ಬಂದಿಯ ನೆರವಿನೊಂದಿಗೆ ಹೇರ್ ಕ್ಲಿಪ್, ಪಾಕೆಟ್ ಚಾಕು ಬಳಸಿ ಹೆರಿಗೆ ಮಾಡಿಸಿದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲಿದ್ದ ಮಹಿಳೆಯನ್ನು ಕಂಡ ಕೂಡಲೇ ಸಮಯ ವ್ಯರ್ಥ ಮಾಡದೇ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಲು ಸಿದ್ಧನಾದೆ. ವೈದ್ಯರು ತುರ್ತು ಸಂದರ್ಭಕ್ಕೆ ಸದಾ ಸಿದ್ಧರಾಗಿರಬೇಕು. ದೇವರ ದಯೆಯಿಂದ ನಾನು ಎರಡು ಜೀವಗಳನ್ನು ಉಳಿಸಿದೆ’ ಎಂದು ಡಾ.ರೋಹಿತ್ ತಿಳಿಸಿದರು. ಹೆರಿಗೆ ಬಳಿಕ ಮಗು ಮತ್ತು ಬಾಣಂತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.