LATEST NEWS
ಊರಿನ ಜನರ ಮಾತಿಗೆ ತನ್ನ ಸ್ವಂತ ಮಗಳನ್ನು ಗುಂಡಿಕ್ಕಿ ಕೊಂದ ಅಪ್ಪ – ರಾಜ್ಯಮಟ್ಟದ ಟೆನಿಸ್ ಆಟಗಾರ್ತಿಯ ಧಾರುಣ ಅಂತ್ಯ

ಗುರುಗ್ರಾಮ 11: ತನ್ನ ಮಗಳ ಬಗ್ಗೆ ತನ್ನ ಹಳ್ಳಿಯಲ್ಲಿ ಆಡಿಕೊಳ್ಳುತ್ತಿರುವ ಮಾತಿನಿಂದ ನೊಂದ ಅಪ್ಪ ತನ್ನ ಮಗಳನ್ನು ಆಕೆ ಅಡುಗೆ ಮಾಡುತ್ತಿರುವ ವೇಳೆ ಹಿಂದಿನಿಂದ ಗುಂಡು ಹಾರಿಸಿ ಕೊಂದ ಘಟನೆ ಗುರುವಾರ ಬೆಳಿಗ್ಗೆ ಗುರುಗ್ರಾಮ್‌ನಲ್ಲಿರುವ ಅವರ ಮನೆಯಲ್ಲಿ ನಡೆದಿದೆ.
ಮೃತಳನ್ನು 25 ವರ್ಷದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಎಂದು ಗುರುತಿಸಲಾಗಿದೆ. ಅಡುಗೆ ಮಾಡುತ್ತಿದ್ದ ಮಗಳ ಮೇಲೆ ತಂದೆ ಹಿಂದಿನಿಂದ ಬಂದು ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಗಳನ್ನು ಹತ್ಯೆಗೈದ ದೀಪಕ್ ಯಾದವ್(49) ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಪರವಾನಗಿ ಪಡೆದ ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪೊಲೀಸ್ ಮಾಹಿತಿಗಳ ಪ್ರಕಾರ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಗಳನ್ನು ಮಾಡುವುದರಿಂದ ಅವರು ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ. ಸೆಕ್ಟರ್ 57 ರಲ್ಲಿರುವ ಅವರ ಮನೆಯ ಮೊದಲ ಮಹಡಿಯಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ತಂದೆ ರಾಧಿಕಾ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು.
ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ತಂದೆಯನ್ನು ಬಂಧಿಸಿದರು. ಗುಂಡು ಹಾರಿಸಲು ಬಳಸಲಾದ ರಿವಾಲ್ವರ್ ಅನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದಂತೆ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದರು, ಅಲ್ಲದೆ ತನ್ನದೇ ಒಂದು ಟೆನಿಸ್ ಅಕಾಡೆಮಿ ಕೂಡ ನಡೆಸುತ್ತಿದ್ದರು. ರಾಧಿಕಾ ತಂದೆ ತನ್ನ ಗ್ರಾಮಕ್ಕೆ ತೆರಳುವ ವೇಳೆ ಅಲ್ಲಿಯ ಜನರು ಇವರನ್ನು ಮಗಳ ವಿಚಾರಕ್ಕೆ ಹಿಯಾಳಿಸುತ್ತಿದ್ದರು ಎಂದು ಹೇಳಲಾಗಿದೆ . ಇದರಿಂದ ನೊಂದಿದ್ದ ರಾಧಿಕಾ ಅಪ್ಪ ಆಕೆಯನ್ನು ಕೊಲೆ ಮಾಡಿದ್ದಾರೆ.
ರಾಧಿಕಾ ಯಾದವ್ ಒಬ್ಬ ಪ್ರಸಿದ್ಧ ಟೆನಿಸ್ ಆಟಗಾರ್ತಿಯಾಗಿದ್ದು, ಅವರು ವಿವಿಧ ಪಂದ್ಯಾವಳಿಗಳಲ್ಲಿ ರಾಜ್ಯ ಮತ್ತು ದೇಶ ಎರಡನ್ನೂ ಪ್ರತಿನಿಧಿಸಿದ್ದರು, ಹಲವಾರು ಪದಕಗಳು ಮತ್ತು ಪುರಸ್ಕಾರಗಳನ್ನು ಗೆದ್ದಿದ್ದರು. ಆದಾಗ್ಯೂ, ಎರಡು ವರ್ಷಗಳ ಹಿಂದೆ, ಅವರು ಗಾಯಗೊಂಡಿದ್ದರಿಂದ ಸ್ಪರ್ಧಾತ್ಮಕ ಕ್ರೀಡೆಗಳಿಂದ ದೂರ ಸರಿಯಬೇಕಾಯಿತು. ಇತ್ತೀಚಿನ ತಿಂಗಳುಗಳಲ್ಲಿ, ರಾಧಿಕಾ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿ ವೃತ್ತಿಜೀವನವನ್ನು ನಿರ್ಮಿಸುವತ್ತ ಗಮನಹರಿಸಿದ್ದರು. ಅವರು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳಲ್ಲಿ ಆಗಾಗ್ಗೆ ರೀಲ್‌ಗಳನ್ನು ರಚಿಸಿ ಪೋಸ್ಟ್ ಮಾಡುತ್ತಿದ್ದರು.
1 Comment