DAKSHINA KANNADA
ರಾಜ್ಯದ ಅತೀ ಶ್ರೀಮಂತ ದೇವಾಲಯದ ಆದಾಯ ನಾಲ್ಕು ತಿಂಗಳಲ್ಲಿ ಕೇವಲ 4 ಕೋಟಿ
ಬೆಂಗಳೂರು: ಕೊರೊನಾದಿಂದಾಗಿ ದೇವಾಲಯಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಅನ್ ಲಾಕ್ ಗಳಲ್ಲಿ ದೇವಸ್ಥಾನಗಳನ್ನು ತೆರೆದರೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿದೆ ಇರುವುದು ಆದಾಯದಲ್ಲಿ ಭಾರೀ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ರಾಜ್ಯ ಮುಜರಾಯಿ ದೇವಸ್ಥಾನಗಳಿಂದ ಕಳೆದ ವರ್ಷ 317 ಕೋಟಿ ರೂ. ಆದಾಯ ಗಳಿಸಿದ್ದರೆ ಈ ಬಾರಿ ಏಪ್ರಿಲ್ 1ರಿಂದ ಜುಲೈ 31ರವರೆಗೆ ಕೇವಲ 18 ಕೋಟಿ ರೂ. ಆದಾಯ ಬಂದಿದೆ.
ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿಯಾದ ಮಾರ್ಚ್ 24ರಿಂದ ಜೂನ್ 8 ರವರೆಗೆ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆದರೆ ಜೂನ್ 8ರಿಂದ ದೇವಸ್ಥಾನ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದ್ದರೂ ಭಕ್ತರು ದೇವಸ್ಥಾನಕ್ಕೆ ಆಗಮಿಸದ ಕಾರಣ ಆದಾಯ ಇಳಿಕೆಯಾಗಿದೆ.
ಆದಾಯ ಸಂಗ್ರಹದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮೊದಲ ನಾಲ್ಕು ತಿಂಗಳಲ್ಲಿ ಗಳಿಸಿದ್ದು ಕೇವಲ 4.28 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಒಟ್ಟು 98.92 ಕೋಟಿ ರೂ. ಗಳಿಸಿತ್ತು.
ಕೊಲ್ಲೂರು ಮೂಕಾಂಬಿಕಾ ದೇವಾಲಯ 4.51 ಕೋಟಿ ರೂ (ಕಳೆದ ವರ್ಷ 45.65 ಕೋಟಿ ರೂ.), ಮೈಸೂರಿನ ಚಾಮುಂಡೇಶ್ವರಿ ದೇಗುಲ 7.4 ಕೋಟಿ ರೂ.(ಕಳೆದ ವರ್ಷ 35.23 ಕೋಟಿ ರು.) ಕಟೀಲು ದುರ್ಗಾಪರಮೇಶ್ವರಿ ದೇವಾಲಯ 1.05 ಕೋಟಿ ರೂ. (ಕಳೆದ ವರ್ಷ 25.42 ಕೋಟಿ ರೂ.) ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ 1.25 ಕೋಟಿ ರು.(ಕಳೆದ ವರ್ಷ 20.80 ಕೋಟಿ ರೂ.) ಆದಾಯ ಗಳಿಸಿದೆ.