LATEST NEWS
ಟೆಕ್ ಕಂಪನಿ CEO- HR ಕದ್ದುಮುಚ್ಚಿ ಸರಸ: ಕ್ಯಾಮೆರಾಗೆ ಸಿಕ್ಕಿಬಿದ್ದು ಪಜೀತಿ!

ಅಮೆರಿಕ, ಜುಲೈ 18: ಅಮೆರಿಕದ ಟೆಕ್ ಕಂಪನಿ ಒಂದರ ಸಿಇಒ ಹಾಗೂ ಆ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸರಸ ಸಲ್ಲಾಪದಲ್ಲಿದ್ದಾಗ ಕ್ಯಾಮೆರಾ ಎದುರು ಸಿಕ್ಕುಬಿದ್ದು ಪಜೀತಿ ಅನುಭವಿಸಿರುವ ಘಟನೆ ನಡೆದಿದೆ.
ಒಹಿಯೊ ರಾಜ್ಯದ ಸಿನ್‌ಸಿನಾಟಿ ಮೂಲದ ಅನೊಮರ್ ಎಂಬ ಕಂಪನಿಯ ಸಿಇಒ ಆಯಂಡಿ ಬೇರಾನ್ ಹಾಗೂ ಅದೇ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಣಿಯಾದ ಕ್ರಿಸ್ಟಿನ್ ಕ್ಯಾಬೊಟ್ ಸಂಬಂಧದಲ್ಲಿರುವುದು ಬಹಿರಂಗವಾಗಿದೆ.
ಹೀಗಾಗಿ ಈ ಜೋಡಿ ಸದ್ಯ ಮುಜುಗರ ಅನುಭವಿಸುವಂತಾಗಿದೆ. ಇತ್ತೀಚೆಗೆ ಬೋಸ್ಟನ್ ಗಿಲ್ಲೇಟ್ ಸ್ಟೇಡಿಯಂನಲ್ಲಿ ಅದ್ದೂರಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಈ ಜೋಡಿ ಭಾಗವಹಿಸಿತ್ತು. ಕ್ರೀಡಾಂಗಣದಲ್ಲಿ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ಪರದೆಗಳನ್ನು ಹಾಕಲಾಗಿತ್ತು.

ಕಾರ್ಯಕ್ರಮದಲ್ಲಿ ಕ್ಯಾಮೆರಾಮೆನ್ ಮಾಡಿದ ಕೈಚಳಕದಿಂದ ಕ್ವಿಸ್ಟಿನ್ ಅವರ ಜೊತೆ ಆಯಂಡಿ ಬೇರಾನ್ ಆತ್ಮೀಯವಾಗಿರುವ ದೃಶ್ಯ ಪರದೆಯಲ್ಲಿ ಬಿತ್ತರವಾಗಿದೆ. ಇದನ್ನು ಗಮನಿಸಿ ತಕ್ಷಣವೇ ಅಡಗಿಕೊಳ್ಳಲು ಯತ್ನಿಸಿದ್ದಾರೆ, ಕ್ಯಾಮೆರಾದಿಂದ ದೂರ ಸರಿಯಲು ಯತ್ನಿಸಿದ್ದಾರೆ. ಅದೇ ವೇಳೆ ಯಾರೋ ಕಿಡಿಗೇಡಿಗಳು ಈ ಘಟನೆಯನ್ನು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು ಟ್ರೋಲ್‌ಗಳಿಗೂ ಕಾರಣವಾಗಿದೆ. ಅಲ್ಲದೇ ಪರ-ವಿರೋಧದ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ.
ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆಯಂಡಿ ಬೇರಾನ್ ಅವರು ತಮ್ಮ ಪತ್ನಿ ಮೇಗನ್ ಹಾಗೂ ಇಬ್ಬರು ಮಕ್ಕಳು ಮತ್ತು ಕಂಪನಿಯ ಸಿಬ್ಬಂದಿ ಬಳಿ ಕ್ಷಮೆ ಕೇಳಿದ್ದಾರೆ. ‘ಘಟನೆ ನಡೆದಾಗ ನಾನು ತೋರಿದ ವರ್ತನೆ ನನಗೆ ನಾಚಿಕೆ ತರಿಸಿದೆ. ಇದು ನನ್ನ ಖಾಸಗಿ ವಿಷಯ. ಆದರೆ, ಬೇರೆಯವರ ಖಾಸಗಿ ಕ್ಷಣಗಳನ್ನು ಹೀಗೆ ಬಹಿರಂಗಗೊಳಿಸುವುದು ಎಷ್ಟು ಸರಿ? ಅದರ ಪರಿಣಾಮ ಹೇಗಿರುತ್ತದೆ. ಈ ರೀತಿ ಮಾಡುವುದು ಸರಿ ಅಲ್ಲ’ ಎಂದು ಕಿಡಿಕಾರಿದ್ದಾರೆ.
ಆಯಂಡಿ ಬೇರಾನ್ ಅವರ ಸ್ಪಷ್ಟನೆಯ ಸಂದೇಶವನ್ನು ಅಸ್ಟೋನೋಮರ್ ಕಂಪನಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ಎಕ್ಸ್ ಸಿಇಒ ಇಲಾನ್ ಮಸ್ಕ್ ಅವರು ಜೋರಾಗಿ ನಗುವ ಎಮೋಜಿ ಹಾಕಿದ್ದಾರೆ. ಕ್ವಿಸ್ಟಿನ್ ಕ್ಯಾಬೊಟ್ ಅವರು ತಮ್ಮ ಪತಿ ಕೆನೆತ್ ತೋರ್ನ್‌ಬಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆದರೆ ಘಟನೆ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.