LATEST NEWS
ಮೇಲಾಧಿಕಾರಿ ಆದೇಶ ಉಲ್ಲಂಘನೆ ಹಿರಿಯ ಶಿಕ್ಷಕಿ ಅಮಾನತು

ಮೇಲಾಧಿಕಾರಿ ಆದೇಶ ಉಲ್ಲಂಘನೆ ಹಿರಿಯ ಶಿಕ್ಷಕಿ ಅಮಾನತು
ಮಂಗಳೂರು ಜುಲೈ 18: ಮೇಲಾಧಿಕಾರಿ ಆದೇಶ ಉಲ್ಲಂಘಿಸಿ ಕರ್ತವ್ಯದಲ್ಲಿ ಮುಂದುವರೆದಿದ್ದ ಹಿರಿಯ ಶಿಕ್ಷಕಿಯೊಬ್ಬರನ್ನು ಅಮಾನತುಗೊಳಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಪಡುಬಿದ್ರಿಯ ಸರಕಾರಿ ಕಾಲೇಜು ಪ್ರೌಢಶಾಲೆ ಹಿರಿಯ ಶಿಕ್ಷಕಿ ಸಂಧ್ಯಾ ಸರಸ್ವತಿ ಅಮಾನತುಗೊಳಗಾಗಿರುವ ಶಿಕ್ಷಕಿ. ಜೂನ್ ತಿಂಗಳಲ್ಲಿ ಮೂರು ತಿಂಗಳ ಅವಧಿಗೆ ಮೂಳೂರು ಶಾಲೆಗೆ ತಾತ್ಕಾಲಿಕ ನಿಯೋಜನೆ ಮಾಡಲಾಗಿತ್ತು. ಆದರೆ ಜುಲೈ ತಿಂಗಳಿನ ಆರಂಭದಲ್ಲಿ ಶಾಲೆ ಬಿಟ್ಟು ತೆರಳಬೇಕಿದ್ದ ಸಂಧ್ಯಾ ಸರಸ್ವತಿ ಮೂಳೂರು ಶಾಲೆಗೆ ತೆರಳದೇ ಕರ್ತವ್ಯ ಲೋಪವೆಸಗಿದ್ದಲ್ಲದೇ, ಡಿಡಿಪಿಐ ಆದೇಶ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದ್ದು, ಅಲ್ಲದೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಡಿಡಿಪಿಐ ವಿರುದ್ದ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಆದೇಶ ಮಾಡಿ ಒಂದು ತಿಂಗಳಾಗುತ್ತಾ ಬಂದರೂ ತೆರಳದಿದ್ದ ಸಂಧ್ಯಾ ಸರಸ್ವತಿಯವರನ್ನು ಇಂದಿನಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಸಂಧ್ಯಾ ಸರಸ್ವತಿಯವರು ಹಿರಿಯ ಶಿಕ್ಷಕಿ ಜೊತೆಗೆ ಮುಖ್ಯೋಪಾಧ್ಯಾಯಿನಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಆದ್ರೆ ಅಮಾನತು ಆದ ಕ್ಷಣದಿಂದಲೇ ತನ್ನ ಜವಾಬ್ದಾರಿಯನ್ನು ಇನ್ನೊಬ್ಬ ಹಿರಿಯ ಶಿಕ್ಷಕರಿಗೆ ನಿರ್ವಹಿಸಬೇಕಾಗಿದ್ದ ಸಂಧ್ಯಾ ಸರಸ್ವತಿ ಈವರೆಗೂ ಅಧಿಕಾರ ಹಸ್ತಾಂತರಿಸಿಲ್ಲ.
ಈ ಶಿಕ್ಷಕಿ ವಿರುದ್ದ ಹಲವಾರು ಸಾರ್ವಜನಿಕ ದೂರು ಬಂದ ಹಿನ್ನೆಲೆಯೂ ನಿಯೋಜನೆ ಮಾಡಿ ಆದೇಶಗೊಳಿಸಲಾಗಿತ್ತು ಅನ್ನೋ ಮಾತು ಕೇಳಿ ಬಂದಿದೆ. ಅಲ್ಲದೇ ಡಿಡಿಪಿಐ ಶೇಷಶಯನ ಕಾರಿಂಜರು ತನ್ನ ವಿರುದ್ದ ಅನಗತ್ಯ ಕಿರುಕುಳ ನೀಡಿ ಅಮಾನತು ಮಾಡಿದ್ದಾರೆ ಅನ್ನೋ ಆರೋಪವನ್ನು ಅಮಾನತುಗೊಳಗಾದ ಶಿಕ್ಷಕಿ ಸಂಧ್ಯಾ ಸರಸ್ವತಿ ಹೊರಿಸಿದ್ದಾರೆ