LATEST NEWS
ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ಮಂಗಳೂರು ಫೆಬ್ರವರಿ 8: ಮಂಗಳೂರು ಪೊಲೀಸರು ಕುಖ್ಯಾತ ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಉಳ್ಳಾಲ ನಿವಾಸಿ ಸಮೀರ್ (26) ಎಂದು ಗುರುತಿಸಲಾಗಿದ್ದು ಈತನನ್ನು ಮಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಮೀರ್ ಜನವರಿ 13 ರಂದು ಇಲ್ಯಾಸ್ ಮೇಲೆ ನಡೆದ ದಾಳಿ ಯಲ್ಲಿ ನೇರವಾಗಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.

ಟಾರ್ಗೆಟ್ ಗ್ಯಾಂಗ್ ನ ಲೀಡರ್ ಇಲ್ಯಾಸ್ ನನ್ನು ಜನವರಿ 13 ರ ಮುಂಜಾನೆ ದುಷ್ಕರ್ಮಿಗಳು ಕೊಲೆಗೈದಿದ್ದರು. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಯಾಸ್ ಜಾಮೀನಿನ ಮೇಲೆ ಹೊರಗೆ ಬಂದ ಎರಡು ದಿನ ಅಂತರದಲ್ಲೇ ಹತ್ಯೆಯಾಗಿದ್ದ.
ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಾಂಡೇಶ್ವರ ಠಾಣಾಧಿಕಾರಿ ಬೆಳಿಯಪ್ಪ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಪೊಲೀಸರಿಗೆ ದೊರೆತಿದ್ದರೂ ಪ್ರಕರಣ ಭೇಧಿಸುವಲ್ಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಆದರೂ ತನಿಖೆ ಮುಂದುವರೆಸಿದ ಪೊಲೀಸರು ಕೇರಳದ ಅಡಗು ತಾಣ ಒಂದರಿಂದ ಸಮೀರ್ ನನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ
ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ಇಲ್ಯಾಸ್ ವಾಸವಾಗಿದ್ದ. ಜನವರಿ 13 ರಂದು ಮುಂಜಾನೆ ದುಷ್ಕರ್ಮಿಗಳಿಬ್ಬರು ಮನೆ ಬಾಗಿಲನ್ನು ಬಡಿದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಲ್ಯಾಸ್ ಮೃತ ಪಟ್ಟಿದ್ದ.