DAKSHINA KANNADA
ತಣ್ಣೀರುಬಾವಿ: ಪೊಲೀಸರಿಂದ ಬಾಲಕನ ಮೇಲೆ ಹಲ್ಲೆ-ತರಾಟೆಗೆತ್ತಿಕೊಂಡ ಸ್ಥಳೀಯರು
ಮಂಗಳೂರು, ಜನವರಿ 02: ಪೊಲೀಸರು ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ರಾತ್ರಿ ನಗರದ ತಣ್ಣೀರುಬಾವಿ ಬೀಚ್ ಸಮೀಪದಲ್ಲಿ ನಡೆದಿದೆ.
ನಗರದ ತಣ್ಣೀರುಬಾವಿ ಬೀಚ್ ಸಮೀಪದಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದ ತಂಡವೊಂದು ಕ್ರಿಕೆಟ್‌ನಲ್ಲಿ ಜಯಗಳಿಸಿ ವಾಪಸ್ಸು ತೆರಳುವ ಸಂದರ್ಭದಲ್ಲಿ ಜಯಘೋಷಗಳನ್ನು ಮೊಳಗಿಸಿ ಹೋಗುತ್ತಿದ್ದರು. ಈ ಸಂದರ್ಭ ಕೆಲವು ಪೊಲೀಸರು ಯುವಕರನ್ನು ತಡೆ ಹಿಡಿದು ವಿಚಾರಣೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬ ಪುಟ್ಟ ಬಾಲಕನ ಮೇಲೆ ಬಾಸುಂಡೆ ಬರುವ ಹಾಗೆ ಎಡಕೈಗೆ ಲಾಠಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಕೆಳಕ್ಕೆ ಬಿದ್ದ ಬಾಲಕನನ್ನು ಸ್ಥಳೀಯರೇ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಸ್ಥಳೀಯರು ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಬಳಿಕ ಪಣಂಬೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯರು ಹೇಳುವಂತೆ ‘ಈ ಬಾಲಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ದೌರ್ಜನ್ಯ ಅಂತಾನೇ ಹೇಳಬಹುದು.
ಆ ಬಾಲಕನಿಗೆ ಮೊದಲೇ ಕಿಡ್ನಿ ಸಮಸ್ಯೆ ಇದ್ದ ಕಾರಣ ಇದೀಗ ಪೊಲೀಸರ ಏಟು ಕೂಡಾ ದೇಹದ ಮೇಲೆ ದುಷ್ಪರಿಣಾಮ ಬೀರಿದೆ. ಇವತ್ತು ಪರೀಕ್ಷೆ ಬರೆಯಬೇಕಿದ್ದ ಬಾಲಕ ಹಾಸಿಗೆ ಹಿಡಿದಿದ್ದಾನೆ. ಪೊಲೀಸರ ಈ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ. ಗಾಯಗೊಂಡ ಬಾಲಕನನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಮಾಹಿತಿ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.