LATEST NEWS
ತಾಯಿಗೆ ಬೈದ ವ್ಯಕ್ತಿಯನ್ನು ಪ್ರಶ್ನಿಸಿದಕ್ಕೆ ಯುವಕನ ಮೇಲೆ ತಲವಾರಿನಿಂದ ಹಲ್ಲೆ

ಮಂಗಳೂರು ಎಪ್ರಿಲ್ 30: ನೀರು ಟ್ಯಾಂಕರ್ ಚಾಲಕನೊಬ್ಬ ಯುವಕನ ಮೇಲೆ ತಲವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ. ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ತಲವಾರು ದಾಳಿಯಿಂದ ಗಾಯಗೊಂಡಿದ್ದು, ಹಲ್ಲೆ ಮಾಡಿದ ಆರೋಪಿಯನ್ನ ಉಳ್ಳಾಲ ಬಸ್ತಿಪಡ್ಪು ನಿವಾಸಿ ಖಲೀಲ್ ಎಂದು ಗುರುತಿಸಲಾಗಿದೆ.
ಉಳ್ಳಾಲ ನಗರಸಭೆಯಿಂದ ನೀರಿನ ಗುತ್ತಿಗೆ ಪಡೆದಿದ್ದ ಟ್ಯಾಂಕರ್ ನಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ನೀರು ಸರಬರಾಜು ಮಾಡುತ್ತಿದ್ದಾಗ ಖಲೀಲ್ ಮಹಿಳೆಯೊಬ್ಬರಿಗೆ ಅವ್ಯಾಚ ಶಬ್ದದಿಂದ ಬೈದಿದ್ದು, ಈ ವಿಚಾರದಲ್ಲಿ ಮಹಿಳೆಯ ಪುತ್ರ ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ಉಳ್ಳಾಲದ ನೀರು ತುಂಬಿಸುವ ಬಾವಿ ಬಳಿ ತೆರಳಿದ್ದು ಮಾತಿನ ಚಕಮಕಿ ನಡೆದು ಖಲೀಲ್ ರಿಝ್ವಾನ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾನೆ.

ಇನ್ನು ಗಾಯಗೊಂಡಿದ್ದ ರಿಝ್ವಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. ಖಲೀಲ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.