LATEST NEWS
ಬಜೆಟ್ ಹಣಕ್ಕಾಗಿ ಹಣಕಾಸು ಇಲಾಖೆಗೆ ಲಂಚ – ಹಣ ವಸೂಲಿಗೆ ಹೊರಟ ತಾಲೂಕು ಪಂಚಾಯತ್ ಇಓ

ಬಜೆಟ್ ಹಣಕ್ಕಾಗಿ ಹಣಕಾಸು ಇಲಾಖೆಗೆ ಲಂಚ – ಹಣ ವಸೂಲಿಗೆ ಹೊರಟ ತಾಲೂಕು ಪಂಚಾಯತ್ ಇಓ
ಮಂಗಳೂರು ಸೆಪ್ಟೆಂಬರ್ 16: ಗ್ರಾಮ ಪಂಚಾಯತ್ ಬಜೆಟ್ ಹಣ ಬಿಡುಗಡೆಗಾಗಿ ಲಂಚದ ಬೇಡಿಕೆಯಿರಿಸಿದ್ದ ಅಧಿಕಾರಿಯೋರ್ವನನ್ನು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬಜೆಟ್ ಹಣಕ್ಕಾಗಿ ಹಣಕಾಸು ಇಲಾಖೆಗೆ ಲಂಚ ಕೊಡಬೇಕೆಂದು ಮಂಗಳೂರು ತಾಲೂಕು ಪಿಡಿಒ ಅಧಿಕಾರಿಗಳನ್ನು ಮಂಗಳೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಸದಾನಂದ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಬಜೆಟ್ ಫೈಲ್ ವಿಲೇವಾರಿ ಮಾಡುತ್ತಿರಲಿಲ್ಲ ಎಂಬ ಆರೋಪವೂ ಎದುರಾಗಿತ್ತು.

ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಪಿಡಿಓಗಳು ತಾಲೂಕು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸ್ಥಳಕ್ಕಾಗಮಿಸಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಮುಂದೆಯೇ ಲಂಚಕ್ಕೆ ಬೇಡಿಕೆಯಿರಿಸಿದ್ದನ್ನು ಅಧಿಕಾರಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಹಣಕಾಸು ಇಲಾಖೆಗೆ ಹಣ ಕೊಡಬೇಕು ಎಂದು ಹೇಳಿದ್ದಾರೆನ್ನೆಲಾಗಿದೆ. ಈ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಭರತ್ ಶೆಟ್ಟಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.