LATEST NEWS
ಗಾಂಜಾ ಹಾವಳಿ ತಡೆಗೆ ಕಠಿಣ ಕ್ರಮಕ್ಕೆ ಸಚಿವ ರೈ ಖಡಕ್ ಸೂಚನೆ
ಗಾಂಜಾ ಹಾವಳಿ ತಡೆಗೆ ಕಠಿಣ ಕ್ರಮಕ್ಕೆ ಸಚಿವ ರೈ ಖಡಕ್ ಸೂಚನೆ
ಮಂಗಳೂರು,ಅಕ್ಟೋಬರ್ 12 : ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಭೆ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಬದಲಾಗುತ್ತಿರುವ ಮಾದಕ ವ್ಯಸನಗಳ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಂಗಳೂರಿನ ಸರ್ಕಿಟ್ ಹೌಸಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಗಾಂಜಾ ಹಾವಳಿಯನ್ನು ಪರಿಣಾಮಕಾರಿಯಾಗಿ ಮಟ್ಟಹಾಕಬೇಕು ಎಂದು ಸೂಚಿಸಿದರು. ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸುದೀರ್ ರೆಡ್ಡಿ, ಡಿಸಿಪಿ, ಎಸಿಪಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಚಿವ ರಮಾನಾಥ ರೈ ಉಳ್ಳಾಲದಲ್ಲಿ ಕೆಲ ದಿನಗಳ ಹಿಂದೆ ನಡೆದ ಜುಬೇರ್ ಕೊಲೆ ಪ್ರಕರಣಕ್ಕೂ ಗಾಂಜಾ ವ್ಯವಹಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಷಷ್ಟಪಡಿಸಿದರು.
ಜಿಲ್ಲೆಯಲ್ಲಿ ಮಾದಕ ವ್ಯಸನದ ಜಾಲ ಸ್ವಲ್ಪ ಮಟ್ಟಿಗೆ ಇದೆ ಎಂದು ಒಪ್ಪಿಕೊಂಡ ಸಚಿವರು ಗಾಂಜಾ ವಿಚಾರವನ್ನು ಜಿಲ್ಲೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಕರಾವಳಿಯಲ್ಲಿ ಗಾಂಜಾ ವಹಿವಾಟು ಹೆಚ್ಚಳವಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಕಿಡಿಕಾರಿದ ಅವರು ವಿನಾಕಾರಣ ಗಾಂಜಾ ವಿಚಾರವನ್ನು ಬಿಜೆಪಿ ರಾಜಕೀಯಗೊಳಿಸಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ದೂರಿದರು .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹತೋಟಿಗೆ ತರಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ ಅವರು ಮಾದಕ ವಸ್ತುಗಳ ಪತ್ತೆಗೆ ಪ್ರತ್ಯೇಕ ಪೊಲೀಸ್ ಠಾಣೆ (Anti Drug Squad) ಯನ್ನು ಮಂಗಳೂರಿನಲ್ಲಿ ತೆರೆಯಲಾಗಿದೆ. ಈ ಠಾಣೆಯನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಸಧೃಡಗೊಳಿಸಲಾಗುವುದು ಎಂದರು.