ನವದೆಹಲಿ, ಏಪ್ರಿಲ್ 26: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ್ಯೂರಿಚ್ಗೆ ಹೊರಡಬೇಕಿದ್ದ ಸ್ವಿಸ್ ಏರ್ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಆರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

ಸ್ವಿಸ್ ವಿಮಾನಯಾನ ಸಂಸ್ಥೆಯ LX147 (ಏರ್ಬಸ್ A330) ವಿಮಾನವು 228 ಪ್ರಯಾಣಿಕರು ಹಾಗೂ ನಾಲ್ಕು ಶಿಶುಗಳೊಂದಿಗೆ ಬೆಳಗಿನ ಜಾವ 1.08ಕ್ಕೆ ರನ್ವೇಯಲ್ಲಿ ಟೇಕ್ ಆಫ್ ಆಗಲು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಹಠಾತ್ತನೆ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್ ಟೇಕ್ ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ನಿಲ್ಲಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರನ್ನು ರನ್ವೇಯಲ್ಲೇ ತುರ್ತು ಸ್ಲೈಡ್ಗಳ (Emergency Slides) ಮೂಲಕ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಭವಿಸಿದ ನೂಕುನುಗ್ಗಲಿನಲ್ಲಿ ಆರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ವಿಮಾನದ ಸಿಬ್ಬಂದಿ ವರ್ಗಕ್ಕೆ ಯಾವುದೇ ಹಾನಿಯಾಗಿಲ್ಲ.
“ತಾಂತ್ರಿಕ ಕಾರಣಗಳಿಂದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು, ಅವರಿಗೆ ಹೋಟೆಲ್ ವಸತಿ ಹಾಗೂ ಮರು ಬುಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಸ್ವಿಸ್ ಸಂಸ್ಥೆ ತಿಳಿಸಿದೆ. ಘಟನೆಯ ತನಿಖೆಗಾಗಿ ಸ್ವಿಟ್ಜರ್ಲ್ಯಾಂಡ್ನಿಂದ ತಜ್ಞರ ತಂಡ ದೆಹಲಿಗೆ ಆಗಮಿಸಲಿದೆ.