DAKSHINA KANNADA
ದಕ್ಷಿಣಕನ್ನಡದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರಕ್ಕೆ ಭಾರೀ ಹಾನಿ – ಮರದ ಗೆಲ್ಲು ಬಿದ್ದು ಮಹಿಳೆ ಸಾವು

ಮಂಗಳೂರು ಜುಲೈ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆ ಭಾರೀ ಹಾನಿಯನ್ನು ಉಂಟುಮಾಡಿದೆ. ಭಾನುವಾರ ಬೀಸಿ ಬಿರುಗಾಳಿ ಸಹಿತ ಮಳೆಗೆ ಸುಳ್ಯ ತಾಲೂಕಿನಲ್ಲಿ ಮರದ ಗೆಲ್ಲು ಮೈ ಮೇಲೆ ಬಿದ್ದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ.
ಮೃತರನ್ನು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಚತ್ರಪ್ಪಾಡಿಯ ರುಕ್ಮಿಣಿ (62) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಗಾಳಿ-ಮಳೆಯಾಗಿತ್ತು. ಮನೆ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಮರದ ಗೆಲ್ಲು ಮೈ ಮೇಲೆ ಬಿದ್ದು ಸಾವನಪ್ಪಿದ್ದಾರೆ. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದು ಅವರು ಕೆಲಸದ ನಿಮಿತ್ತ ಬೇರೆ ಕಡೆ ಇದ್ದಾರೆ. ರುಕ್ಮಿಣಿಯವರು ಶನಿವಾರವಷ್ಟೇ ಮನೆಗೆ ಬಂದಿದ್ದರು

ಇನ್ನು ಜಿಲ್ಲೆಯ ಹಲವೆಡೆ ಮರಗಳು ಬಿದ್ದು ಗ್ರಾಮೀಣ ಭಾಗದಲ್ಲಿ ವಿಧ್ಯುತ್ ತಂತಿಗಳಿಗೆ ಹಾನಿಯಾಗಿದೆ. ಅಲ್ಲದೆ ಹಲವು ಗಂಟೆಗಳ ಕಾಲ ಕರೆಂಟ್ ಇಲ್ಲದೆ ಜನ ಪರದಾಡಬೇಕಾದ ಸ್ಥಿತಿ ಬಂದೊದಗಿದೆ.
ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮೂರು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲಿದೆ. ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ನೇತ್ರಾವತಿ ನದಿ ಪಾತ್ರದ ಸರಪಾಡಿ, ಮಣಿನಾಲ್ಕೂರು ಗ್ರಾಮದ ಕೆಲವು ಕಡೆ ಅಡಿಕೆ ತೋಟಗಳಿಗೆ ನೀರು
ನುಗ್ಗಿರುವ ಜತೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪುತ್ತೂರು ತಾಲೂಕಿನಲ್ಲೂ ಉತ್ತಮ ಮಳೆಯಾಗಿದ್ದು, ಪಾತೆಮಜಲು ರಸ್ತೆಗೆ ಮರ ಬಿದ್ದು ವಾಹನ ಸಂಚಾರದಲ್ಲಿ ವ್ಯತ್ಯಯಗೊಂಡಿತ್ತು.