BELTHANGADI
ಸ್ವಚ್ಚ್ ಬಸ್ ಧರ್ಮಸ್ಥಳದಿಂದ ಅನುಷ್ಟಾನ : ಡಾ.ಹೆಗ್ಗಡೆ ಚಾಲನೆ
ಬೆಳ್ತಂಗಡಿ,ಆಗಸ್ಟ್ 28 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯಡಿ ಹಲವಾರು ಜಾಗೃತಿ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಲೇ ಇವೆ. ಸಾಕಷ್ಟು ಮಟ್ಟದಲ್ಲಿ ಇದಕ್ಕೆ ಸ್ಪಂದನೆ ಕೂಡ ದೊರೆತಿದ್ದು ದೇಶಾದ್ಯಂತ ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಲಾರಂಭಿಸಿದೆ. ಆದರೆ ಕರ್ನಾಟಕದಲ್ಲಿನ ಸರ್ಕಾರಿ ಸಾರಿಗೆ ಬಸ್ ಗಳ ವಿಚಾರದಲ್ಲಿ ಬಂದರೆ ಮಾತ್ರ ಇದು ಸುಳ್ಳಾಗಿದೆ. ಸರ್ಕಾರಿ ಬಸ್ಸುಗಳಲ್ಲಿ ಅದು ಕೂಡ ದೂರ ಪ್ರಯಾಣದ ಮಾರ್ಗಗಳ ಬಸ್ಸುಗಳಲ್ಲಿ ತಿಂದು ಎಸೆಯುವ ಖಾದ್ಯ ಪದಾರ್ಥಗಳು, ಖಾಲಿ ಪ್ಯಾಕೆಟ್ ಗಳು, ಪ್ಲಾಸ್ಟಿಕ್ ಕೈ ಚೀಲಗಳು ಹಾಗೂ ಖಾಲಿ ಬಾಟಲ್ ಗಳು ಬಸ್ಸಿನೊಳಗೆ ಮಾತ್ರವಲ್ಲ ಕಿಟಕಿಯಿಂದ ಹೊರಗೆ ಬಿಸಾಡುವ ಪ್ರವೃತ್ತಿ ಎಲ್ಲೆಡೆ ಕಂಡುಬರುತ್ತದೆ. ಇದರಿಂದ ಪ್ರಯಾಣವೇ ಅಸಹ್ಯ ಎನಿಸುವಷ್ಟು ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ಯಪ್ರವೃತ್ತವಾಗಿದೆ. ಧರ್ಮಾಧಿಕಾರಿ ಡಾ .ಡಿ .ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಬಸ್ ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುದನ್ನು ತಡೆಯಲು ಉಜಿರೆಯ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರ ತಂಡ ಪರಿಹಾರ ಹುಡುಕಿದೆ. ಕಡಿಮೆ ಬಜೆಟ್ ಹಾಗೂ ಅತ್ಯಂತ ಸುಲಭವಾಗಿ ಅಳವಡಿಸಬಲ್ಲ ಕಸದ ಬುಟ್ಟಿ( Dust bin) ಯೊಂದನ್ನು ಈ ತಂಡ ಸಿದ್ದಪಡಿಸಿದೆ. ಕಸದ ಬುಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ.ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ದೂರದ ಊರಿಗೆ ಸಂಚರಿಸುವ ಕರ್ನಾಟಕ ಸಾರಿಗೆ ವೇಗದೂತ ಬಸ್ ನಲ್ಲಿ ಈ ಬುಟ್ಟಿಯನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಬಸ್ಸಿಗೆ ಹತ್ತುವ ಮೆಟ್ಟಿಲ ಬದಿಯಲ್ಲಿಯೇ ಇದನ್ನು ವ್ಯವಸ್ಥೆಗೊಳಿಸಲಾಗಿದೆ. ಈ ಪ್ರಯೋಗ ಸಫಲವಾದರೆ ಮುಂಬರುವ ದಿನಗಳಲ್ಲಿ ಧರ್ಮಸ್ಥಳಕ್ಕೆ ಬರುವ ಎಲ್ಲ ಸಾರಿಗೆ ಬಸ್ ಗಳಿಗೂ ಈ ಕಸದ ಬುಟ್ಟಿಯನ್ನು ಅಳವಡಿಸುವ ಯೋಜನೆ ಕೂಡ ರೂಪಿಸಲಾಗಿದ್ದು ಬಸ್ಸಿನೊಂದಿಗೆ ಬಸ್ ಸಂಚರಿಸುವ ಮಾರ್ಗಗಳಲ್ಲೂ ಇದರಿಂದ ಸ್ವಚ್ಚತೆ ಕಾಪಾಡಲು ಮುಂಬರುವ ದಿನಗಳಲ್ಲಿ ಸಾಧ್ಯವಾಗುವುದು.