LATEST NEWS
ಸುರತ್ಕಲ್ ಟೋಲ್ ಗೇಟ್ ಸುತ್ತಮುತ್ತ ಸೆಕ್ಷನ್ 144…!!

ಮಂಗಳೂರು ಅಕ್ಟೋಬರ್ 28: ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭವಾಗುವ ಸಾಧ್ಯತೆ ಹಿನ್ನಲೆ ಇದೀಗ ಸುರತ್ಕಲ್ ಟೋಲ್ ಗೇಟ್ ನ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 28ರಿಂದ ನವಂಬರ್ 3ರ ಸಂಜೆ 6 ಗಂಟೆಯ ತನಕ ಸುರತ್ಕಲ್ ಪೊಲೀಸ್ ಠಾಣೆಯ ಟೋಲ್ ಪ್ಲಾಜಾದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸೆಕ್ಷನ್ ಜಾರಿಯಲ್ಲಿರುವ ಭಾಗದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಘೋಷಣೆಗಳನ್ನು ಕೂಗುವುದು, ಭಿತ್ತಿ ಪತ್ರ ಪ್ರದರ್ಶನ, ಶಸ್ತ್ರಗಳನ್ನು ಕೊಂಡೊಯ್ಯುವುದು, ಪಟಾಕಿ ಸಿಡಿಸುವುದು, ಕಲ್ಲೆಸೆತ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಅಧಿಕಾರಿಗಳ ವಿರುದ್ಧ ಅವಾಚ್ಯ ಭಾಷಣ, ಘೋಷಣೆಗಳನ್ನು ಕೂಡ ನಿಷೇಧಿಸಲಾಗಿದೆ. ಮೆರವಣಿಗೆ, ಜಾಥಾ, ರಸ್ತೆ ತಡೆ ಕೂಡ ನಡೆಸಲು ಅವಕಾಶವಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಹೊರಡಿಸಿರುವ ನಿಷೇಧಾಜ್ಞೆಯ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.