LATEST NEWS
ಸುರತ್ಕಲ್ ಟೋಲ್ ಗೇಟ್ ಧರಣಿ ಮುಂದೂಡುವಂತೆ ಜಿಲ್ಲಾಧಿಕಾರಿ ಸಲಹೆ
ಮಂಗಳೂರು ಅಕ್ಟೋಬರ್ 28:- ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿದ್ದು, ಸರ್ಕಾರವು ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ವರೆಗೂ ಧರಣಿಯನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಸುರತ್ಕಲ್ ಟೋಲ್‍ಗೇಟ್ ಹೋರಾಟ ಸಮಿತಿಯ ಸದಸ್ಯರಿಗೆ ಸಲಹೆ ನೀಡಿದರು.
ಗೆಜೆಟ್ ನೋಟಿಫಿಕೇಷನ್ ಹೊರಡಿಸುವವರೆಗೂ ಟೋಲ್ ಗೇಟ್ ತೆರವು ಸಮಿತಿಯವರು ತಾಳ್ಮೆ ವಹಿಸಬೇಕು, ಆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಈ ಸಂದರ್ಭದಲ್ಲಿ ಸಮಿತಿಯವರು ಟೋಲ್ ಗೇಟ್ ಇರುವ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು, ತಪ್ಪಿದ್ದಲ್ಲೀ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಅನುಮತಿ ನೀಡಿದ್ದು, ಗೆಜೆಟ್ ನೋಟಿಫಿಕೇಷನ್ ಬಾಕಿ ಉಳಿದಿದೆ, ನೋಟಿಫಿಕೇಷನ್ ಆಗುವ ದಿನಾಂಕವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆದ ಕಾರಣ ಟೋಲ್ ಗೇಟ್ ಹೋರಾಟ ಸಮಿತಿಯವರು ಯಾವುದೇ ರೀತಿಯ ಧರಣಿಗಳನ್ನು ಕೈಗೊಳ್ಳದಂತೆ ಕೋರಿದರು.