LATEST NEWS
ನ್ಯಾಯದೇವತೆಯ ಹೊಸ ರೂಪ – ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿ ಇನ್ನಿಲ್ಲ
ನವದೆಹಲಿ ಅಕ್ಟೋಬರ್ 17: ನ್ಯಾಯಾಲಯಗಳಲ್ಲಿರುವ ನ್ಯಾಯದೇವತೆಯ ಹೊಸ ರೂಪದಲ್ಲಿ ಮುಂದೆ ಬರಲಿದ್ದು, ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯದೇವತೆಯ ಮೂರ್ತಿ ಕಾಣಸಿಗಲಿದೆ.
ಬ್ರಿಟೀಷ್ ದಾಸ್ಯದ ಪ್ರತೀಕವಾಗಿರುವ ಈ ಹಿಂದಿನ ನ್ಯಾಯದೇವತೆಯ ಮೂರ್ತಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಈ ಹಿಂದೆ ಇದ್ದ ನ್ಯಾಯದೇವತೆಯ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿತ್ತು. ಸಂಪತ್ತು, ಅಧಿಕಾರ, ಸ್ಥಾನಮಾನವನ್ನು ಪರಿಗಣಿಸದೇ ಎಲ್ಲರಿಗೂ ಸಮಾನ ನ್ಯಾಯವನ್ನು ದೊರಕಬೇಕು ಎಂಬ ಆಶಯವನ್ನು ಇದು ಸೂಚಿಸುತ್ತಿತ್ತು. ಅಲ್ಲದೇ ಒಂದು ಕೈಯಲ್ಲಿ ತಕ್ಕಡಿ ಹಿಡಿದರೆ ಮತ್ತೊಂದು ಕೈಯಲ್ಲಿ ಖಡ್ಗವಿತ್ತು.
ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿರುವ ನ್ಯಾಯದೇವತೆಯ ಪ್ರತಿಮೆಯ ಹೊಸ ರೂಪ. ನ್ಯಾಯದೇವತೆಯ ಹೊಸ ಪ್ರತಿಮೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಖಡ್ಗ ಹಿಡಿದಿರುವ ಕೈಯಲ್ಲಿ ಸಂವಿಧಾನ ಪ್ರತಿಯಿದೆ. ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯಲಾಗಿದೆ ಎಂದು ಆಲ್ ಇಂಡಿಯಾ ರೇಡಿಯೊ ವರದಿ ಮಾಡಿದೆ.
ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಭಾರತ ಮುಂದುವರಿಯಬೇಕಾಗಿದೆ. ನ್ಯಾಯದೇವತೆ ಕುರುಡಲ್ಲ, ಅವಳು ಎಲ್ಲರನ್ನು ಸಮಾನವಾಗಿ ನೋಡುತ್ತಾಳೆ ಎಂಬ ಸಂದೇಶವನ್ನು ರವಾನಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ .
You must be logged in to post a comment Login