LATEST NEWS
12 ಕೋಟಿ ರೂ ಜೀವನಾಂಶಕ್ಕೆ ಬೇಡಿಕೆಯಿಟ್ಟ ಪತ್ನಿ: ಭಿಕ್ಷೆ ಬೇಡಬಾರದು, ನೀವೇ ದುಡಿದು ಸಂಪಾದಿಸಿ ಎಂದ ಸುಪ್ರೀಂ ಕೋರ್ಟ್
ಮುಂಬೈ, ಜುಲೈ 24: ಇತ್ತೀಚೆಗೆ ದಾಂಪತ್ಯ ಜೀವನದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ, ಜಗಳಗಳು ಡಿವೋರ್ಸ್ ಪಡೆಯುವ ಹಂತಕ್ಕೆ ಹೋಗಿ ತಲುಪುತ್ತಿದೆ. ಹೀಗೆ ಪತಿ ಪತ್ನಿಯರ ನಡುವೆ ಡಿವೋರ್ಸ್ ಆದ್ರೆ ಪತಿಯಾದವನು ಮಾಜಿ ಪತ್ನಿಗೆ ಇಂತಿಷ್ಟು ಜೀವನಾಂಶ ನೀಡಬೇಕು ಎಂಬುದು ಕಾನೂನು ಇದೆ. ಕೆಲವರು ಇದನ್ನೇ ಬಂಡವಾಳವಾಗಿಟ್ಟುಕೊಂಡು ಜೀವನಾಂಶಕ್ಕೆ ಭಾರಿ ಬೇಡಿಕೆ ಇಟ್ಟಿರುವ ಘಟನೆಗಳು ನಡೆದಿದೆ.
ಇದೀಗ ಮಹಿಳೆಯೊಬ್ಬರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಪತಿಯ ಬಳಿ 12 ಕೋಟಿ ರೂ, ಮುಂಬೈನಲ್ಲಿ ಮನೆ ಹಾಗೂ ಬಿಎಂಡಬ್ಲ್ಯೂ ಕಾರು ಬೇಕೆಂದು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾಳೆ. ಈ ಮಹಿಳೆಯ ಬೇಡಿಕೆ ನೋಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡು ನೀವು ಕೆಲಸಕ್ಕೆ ಹೋಗಿ ಸಂಪಾದಿಸಿ ಎಂದು ಖಡಕ್ ಆಗಿ ಹೇಳಿದ್ದಾರೆ.

18 ತಿಂಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು ಪತಿಯಿಂದ ವಿಶೇಷ ಬೇಡಿಕೆಯಿಟ್ಟಿದ್ದು, ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ನೀವು ಐಟಿ ವೃತ್ತಿಪರರು, ಎಂಬಿಎ ಪದವೀಧರಾಗಿದ್ದೀರಿ. ಮದುವೆಗೂ ಮೊದಲು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಾ. ನಿಮ್ಮ ಸ್ವ ಇಚ್ಛೆಯಿಂದ ಮದುವೆಯ ಬಳಿಕ ಕೆಲಸ ಮಾಡುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡಿದ್ದೀರಿ.
ನಿಮ್ಮಲ್ಲಿರುವ ಕೆಲಸದ ಅನುಭವಕ್ಕೆ ಬೆಂಗಳೂರು, ಹೈದರಾಬಾದ್ ನಲ್ಲಿ ಕೈತುಂಬಾ ಸಂಬಳ ಇರುವ ಕೆಲಸ ಸಿಗುತ್ತದೆ. ಆದರೆ ನೀವು ಜೀವನಾಂಶಕ್ಕೆ ಬೇಡಿಕೆ ಇಡುತ್ತಿದ್ದೀರಾ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ನಿಮಗೆ ನೀಡಲು ಒಪ್ಪಿರುವಂತಹ 4 ಕೋಟಿ ರೂ. ಜೀವನಾಂಶ ಹಾಗೂ ಫ್ಲ್ಯಾಟ್ ಪಡೆದು ನಿಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಬಹುದು. ನೀವು ವಿದ್ಯಾವಂತರಾಗಿದ್ದೀರಿ, ಹೀಗಾಗಿ ನೀವು ನಿಮಗಾಗಿ ಭಿಕ್ಷೆ ಬೇಡಬಾರದು. ನೀವು ನಿಮಗಾಗಿ ಸಂಪಾದಿಸಿ ತಿನ್ನಬೇಕು ಎಂದು ಹೇಳಿದ್ದಾರೆ.
ಮಹಿಳೆಯು ತನ್ನನ್ನು ಸಮರ್ಥಿಸಿಕೊಳ್ಳುವ ಮೂಲಕ ತನ್ನ ಪತಿ ತುಂಬಾ ಶ್ರೀಮಂತ ವ್ಯಕ್ತಿ ಎಂದು ಹೇಳಿದ್ದಾರೆ. ಅದಲ್ಲದೇ, ನಾನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದೇನೆ ಎಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಲು ಮುಂದಾಗಿದ್ದಾರೆ. ನಾನು ನಿಮಗೆ ಸ್ಕಿಜೋಫ್ರೇನಿಯಾದಂತೆ ಕಾಣುತ್ತೇನೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಆದರೆ ನೀವು ಗಂಡ ನೀಡುವ ಜೀವನಾಂಶವನ್ನು ಅವಲಂಬಿಸಿರುವುದು ಸರಿಯಲ್ಲ, ನೀವು ಸ್ವಾವಲಂಬಿಯಾಗಿ ಹಾಗೂ ನಿಮ್ಮ ಘನತೆ ಗೌರವವನ್ನು ನೀವೇ ಕಾಪಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇದೀಗ ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.