LATEST NEWS
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಸುಪ್ರೀಂಕೋರ್ಟ್ ನಿಂದ ಬಿಗ್ ರಿಲೀಫ್
ಮಂಗಳೂರು ಫೆಬ್ರವರಿ 04: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಹಣ ಸುಲಿಗೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಎಫ್ಐಆರ್ ರದ್ದು ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆಯ ಆದರ್ಶ ಅಯ್ಯರ್ ಎಂಬುವವರು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣ ರದ್ದು ಕೋರಿ ಇತ್ತೀಚೆಗೆ ನಳೀನ್ ಕುಮಾರ್ ಕಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 30 ರಂದು ಅರ್ಜಿ ವಿಚಾರಣೆ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ತನಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಹಾಗಾಗಿ ನಳೀನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಇನ್ನಿತರರಿಗೂ ಬಿಗ್ ರಿಲೀಫ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು, ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಜನಾಧಿಕಾರ ಸಂಘರ್ಷ ಪರಿಷತ್ತಿನ ಆದರ್ಶ ಅಯ್ಯರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಮಾಡಿದ್ದು, ಅಸ್ಪಷ್ಟ ದೂರು, ಸಂಪೂರ್ಣ ಊಹೆಯ ದೂರು ಎಂದು ಹೇಳಿದೆ. ಆ ಮೂಲಕ ಮೇಲ್ಮನವಿಯನ್ನು ವಜಾಗೊಳಿಸಿದೆ.