Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ ಸಿವಿಲ್‌ಗಿಂತ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ: ಸುಪ್ರೀಂಕೋರ್ಟ್ ನ್ಯಾಯಾಮೂರ್ತಿ ಅಬ್ದುಲ್ ನಜೀರ್

ಉಡುಪಿ, ಡಿಸೆಂಬರ್ 30: ನ್ಯಾಯಾಲಯದಲ್ಲಿನ ಕ್ರಿಮಿನಲ್ ಪ್ರಕರಣಗಳಲ್ಲಿ ಶೇ.95 ರಷ್ಟು ಮಂದಿ ಅಂತಿಮ ವಿಚಾರಣೆಯಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾಗುತ್ತಿದ್ದು, ಇಂತಹ ಪ್ರಕರಣಗಳು ಇತ್ಯರ್ಥಗೊಳ್ಳುವುದಕ್ಕೆ ಸುಮಾರು 10 ವರ್ಷಗಳು ತೆಗೆದುಕೊಳ್ಳಲಿದ್ದು, ಈ ಪ್ರಕ್ರಿಯೆಗಳು ಮುಗಿಯುವವರೆಗೆ ಆಪಾದಿತ ವ್ಯಕ್ತಿಯು ಒಂದು ರೀತಿಯಲ್ಲಿ ಶಿಕ್ಷೆಯನ್ನೇ ಅನುಭವಿಸುತ್ತಾನೆ. ಈ ಬಗ್ಗೆ ಸುಧಾರಣೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯ ಪಟ್ಟಿದ್ದಾರೆ.


ಅವರು ಇಂದು ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ, ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಉಡುಪಿ, ವಕೀಲರ ಸಂಘ ಉಡುಪಿ ಮತ್ತು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಮತ್ತು ನೂತನ ಸಿವಿಲ್ ಜಡ್ಜ್, ಜೆ.ಎಮ್.ಎಫ್.ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ ಆಪಾದಿತ ವ್ಯಕ್ತಿಯು ಪೊಲೀಸ್ ಕಸ್ಟಡಿ, ನ್ಯಾಯಾಂಗ ಕಸ್ಟಡಿ, ವಿಚಾರಣೆ ಹೆಸರಿನಲ್ಲಿ ಬಹುಪಾಲು ಸಮಯ ಬಂಧನದಲ್ಲಿ ಸಿಲುಕುತ್ತಾನೆ. ಅಲ್ಲದೆ ಸುಲಭವಾಗಿ ಜಾಮೀನು ಕೂಡ ಸಿಗದೆ, ವಕೀಲರಿಗೆ ದುಬಾರಿ ಶುಲ್ಕ ಪಾವತಿಸಬೇಕಿರುವುದರಿಂದ ಆತ ಮತ್ತು ಆತನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಾರೆ. ಅಂತಿಮವಾಗಿ ಆತ ನಿರಪರಾಧಿ ಎಂದು ತೀರ್ಪು ಬಂದಾಗ, ಆ ವ್ಯಕ್ತಿಯು ಇದುವರೆಗೆ ಅನುಭವಿಸಿದ ಶಿಕ್ಷೆಗೆ ಹೊಣೆ ಯಾರು ಎಂಬ ಪ್ರಶ್ನೆ ಮೂಡುತ್ತದೆ. ಆದ್ದರಿಂದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯವಾಗಿ ಆಗಬೇಕು ಎಂದರು.


ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಪೊಲೀಸರು ಸಿವಿಲ್ ಪ್ರಕರಣಗಳ ವಿಚಾರಣೆ ಮಾಡುವಂತಿಲ್ಲ. ಇದರಿಂದ ಕ್ರಿಮಿನಲ್ ಪ್ರಕರಣಗಳು ಅಧಿಕವಾಗಲಿವೆ ಎಂದರು. ಉಡುಪಿ ಜಿಲ್ಲೆಯಲ್ಲಿ ಸಿವಿಲ್‌ಗಿಂತ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಕ್ರಿಮಿನಲ್ ಪ್ರಕರಣಗಳು ಅಧಿಕವಿದ್ದಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಬರುತ್ತದೆ ಎಂದ ಅವರು, ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸುವುದು ಮುಖ್ಯವಾಗದೇ ಸಪರ್ಮಕ ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ಅಗತ್ಯ.ಇದರಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದರು. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 3500 ಕ್ಕೂ ಅಧಿಕ ವ್ಯಾಜ್ಯಗಳಿದ್ದು, ಇಲ್ಲಿಗೆ ಪ್ರತ್ಯೇಕ ನ್ಯಾಯಾಲಯ ಆರಂಭಿಸುವ ಅಗತ್ಯವಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಕೋರ್ಟ್ ಕಟ್ಟಡಗಳು ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳು ಅಗತ್ಯವಿದೆ. ವಕೀಲರು ತಮ್ಮ ಕಕ್ಷಿದಾರರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು. ಜಿಲ್ಲೆಯ ನೂತನ ಅನೆಕ್ಸ್ ನ್ಯಾಯಾಲಯ ಮತ್ತು ಬೈಂದೂರು ನ್ಯಾಯಾಲಯಕ್ಕೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಮತ್ತು ಮಾದಕ ವಸ್ತು ವಿರುದ್ಧದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜಿಲ್ಲೆಯ ವಕೀಲರು ತಮ್ಮ ಸಂಘದ ಮೂಲಕ ತಿಂಗಳಲ್ಲಿ ಕನಿಷ್ಠ 1 ದಿನ ಯಾವುದಾದರೊಂದು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಿರಿಯ ನಾಗರೀಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕು. ಮಹಿಳೆಯರು ತಮ್ಮ ಮೇಲೆ ನಡೆಯುವ ಅನ್ಯಾಯಗಳನ್ನು ಧೈರ್ಯದಿಂದ ಪ್ರತಿಭಟಿಸಬೇಕು ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *